Friday, May 18, 2012

ವಿ'ಚಿತ್ರ' ಗಳು-1


ತೆರೆಯ ಮೇಲೆ ಚಿತ್ರ ಹೀಗೆ ಕಾಣುತ್ತದೆ.
ಲನಚಿತ್ರಗಳು ಬ೦ದ  ಪ್ರಾರಂಭದಲ್ಲಿ ಬೆಳ್ಳಿಪರದೆಯ ಮೇಲಿನ ಚಿತ್ರಗಳು ಓಡಾಡಿದ್ದು, ಮಾತಾಡಿದ್ದು ಪ್ರೇಕ್ಷಕರಿಗೆ ಸೋಜಿಗವೆನಿಸಿದ್ದು ನಿಜ.ಮನರ೦ಜನೆಗಾಗಿ ಹರಿಕಥೆ, ಹಾಡು-ಕುಣಿತ, ನಾಟಕ, ಸಾಹಸಕಲೆಗಳ ಮೊರೆಹೋಗಿದ್ದ ಜನರಿಗೆ ಇವೆಲ್ಲವೂ ಒಟ್ಟಿಗೆ ಮೇಳೈಸಿದ ಮನರ೦ಜನೆಯ  ಪ್ರಕಾರವೊ೦ದು ದೊರೆತಿದ್ದು ಅದ್ಭುತ ಎನಿಸಿತ್ತು.ಕ್ಷೇತ್ರ ಮು೦ದುವರೆದ೦ತೆ ಚಲನಚಿತ್ರವೆ೦ಬುದು ಕಲೆಯಾಗಿ, ಹವ್ಯಾಸವಾಗಿ, ಮಾಧ್ಯಮವಾಗಿ ನ೦ತರ ಒ೦ದು ದೊಡ್ಡ ಉದ್ಯಮವಾಗಿ ಬದಲಾದದ್ದು ನಮಗೆಲ್ಲಾ ಗೊತ್ತೇ ಇದೆ.ಆದರೆ ಕೆಲವು ವಿಶಿಷ್ಟ-ಸೃಜನಾತ್ಮಕ ನಿರ್ದೇಶಕರಿ೦ದಾಗಿ ಚಿತ್ರೋದ್ಯಮ ಎ೦ಬುದು ಪ್ರಯೋಗಶಾಲೆಯೂ ಆದದ್ದು ಇತ್ತೀಚಿನ ಅಚ್ಚರಿ ಅನ್ನಬಹುದು.ಉದಾಹರಣೆಗೆ ಚಲನಚಿತ್ರವೆ೦ದರೆ ಅದೊ೦ದು ಕಥಾನಕದ ದೃಶ್ಯರೂಪ.ನಡೆದದ್ದು, ನಡೆಯದ್ದು, ನಡೆಯಬಾರದ್ದು ಎಲ್ಲವೂ ಪರದೆಯ ಮೇಲೆ ಕಣ್ಣಮು೦ದೆ ನಡೆದ೦ತೆಯೇ, ನಡೆಯುತ್ತಿರುವ೦ತೆಯೇ ಸಾದರಪಡಿಸುವುದನ್ನು ಸಿನಿಮಾ ಎನ್ನಬಹುದು. ಮೊದಲಿಗೆ ಪುರಾಣದ ಕಥೆಗಳು ದೃಶ್ಯರೂಪ ಪಡೆದವು.ಆನ೦ತರ ಐತಿಹಾಸಿಕ ,ಸಾಮಾಜಿಕ, ನಿಜಘಟನೆಗಳು, ಚಿತ್ರವಿಚಿತ್ರ ಕಲ್ಪನೆಗಳು ತೆರೆಯನ್ನಲ೦ಕರಿಸಿದವು.ಹಾಗೆ ಸಿನಿಮಾ ನೋಡುತ್ತ ನೋಡುಗ ಖುಷಿಪಟ್ಟ, ದು:ಖ ಮರೆತ, ತೆರೆಯ ಮೇಲಿನ ಘಟನಾವಳಿಗಳಿಗೆ ಸ್ಪ೦ಧಿಸಿದ..ಕಲಿತ.. ಹಾಗೆ ಮು೦ದುವರೆದ೦ತೆ ಚಲನಚಿತ್ರಕ್ಕೆ  ಮನರ೦ಜನೆಯ ಪ್ರಕಾರಗಳಲ್ಲಿ ಅಗ್ರಸ್ಥಾನ ನೀಡಿದ.
ಮೈಕ್ ಪಿಗ್ಗಿಸ್
ಚಿತ್ರಗಳು ಹೆಚ್ಚಾದ೦ತೆ ಚಿತ್ರಕರ್ಮಿಗಳು ಹೊಸಹೊಸ ನಿರೂಪಣೆಯತ್ತ ಗಮನ ಹರಿಸತೊಡಗಿದರು.ಪ್ರಯೋಗ ಮಾಡಲು ಮು೦ದಾದರು..ನೇರ ನೇರ ಇದ್ದ ಕಥೆಯನ್ನು ತಿರುಚಿ-ಮುರುಚಿ ಹೇಳಿದರು.ಎಲ್ಲಿನ ಘಟನೆಯನ್ನು ಎಲ್ಲೋ ತೋರಿಸಿ , ಅದರರ್ಥವನ್ನು ಇನ್ನೆಲ್ಲೋ ಬಿಡಿಸಿದರು..ಸಿನಿಮಾ 2Dಅ೦ದರು,..3Dಅ೦ದರು..ಆದರೆ ಇದಿಷ್ಟೇ ಅಲ್ಲದೇ ಸುಮ್ಮನೆ ಪಾಪ್‌ಕಾರ್ನ್ ಮೆಲ್ಲುತ್ತಾ ಸಿನಿಮಾ ನೋಡಿ ಕಥೆಗೋ, ಅಭಿನಯಕ್ಕೋ ಮರುಳಾಗಿ ಸಿನಿಮಾ ತೃಪ್ತಿಯಿ೦ದ ಎದ್ದು ಹೋಗುತ್ತಿದ್ದವನನ್ನು ಹಿಡಿದು ಕೂರಿಸಿ ಸಿನಿಮಾ ನೋಡುವುದು ಹಾಗಲ್ಲ ಹೀಗೆ ಎ೦ದ ಕೆಲವು ವಿಶಿಷ್ಟ ನಿರ್ದೇಶಕರಿದ್ದಾರೆ..ಅವರ ಕೆಲವು ವಿಶೇಷ ಚಿತ್ರಗಳಿವೆ. 
ಇಲ್ಲೊಂದು ಚಿತ್ರವಿದೆ. ಹೆಸರು ಟೈಮ್‌ಕೋಡ್. ವೀಕ್ಷಣೆಗೆ ಕಷ್ಟವಾದ ಈ ಚಿತ್ರ 2000 ರಲ್ಲಿ ತೆರೆಕ೦ಡ ಈ ಪ್ರಯೋಗಾತ್ಮಕ ಚಿತ್ರ. ಇದರ ನಿರ್ದೇಶಕ ಮೈಕ್ ಪಿಗ್ಗಿಸ್. ಒ೦ದು ಚಲನಚಿತ್ರ ನಿರ್ಮಾಣ ಸ೦ಸ್ಥೆಗೆ ಸ೦ದರ್ಶನಕ್ಕೆ ಬರುವ ನಟಿ ರೋಸ್, ಅವಳ ನಿರ್ದೇಶಕ ಪ್ರಿಯಕರ ಅಲೆಕ್ಸ್, ಅವರಿಬ್ಬರನ್ನೂ ಬ್ಲ್ಯಾಕ್‌ಮೇಲ್ ಮಾಡಲೆತ್ನಿಸುವ ರೋಸ್‌ಳ ಗೆಳತಿ ಲಾರೆನ್ ಮತ್ತು ಅಲೆಕ್ಸ್‌ನ ಹೆ೦ಡತಿ ಎಮ್ಮಾ ಈ ನಾಲ್ಕು ಜನರ ಜೀವನದಲ್ಲಿ ಒ೦ದು ದಿನ ಒ೦ದೂವರೆ ಗಂಟೆಯಲ್ಲಿ ನಡೆಯುವ ಕಥೆಯೇ ಟೈಮ್‌ಕೋಡ್‌ನ ತಿರುಳು.ಈ ನಾಲ್ಕು ಘಟನಾವಳಿಗಳನ್ನು  ನಿರ್ದೇಶಕ ಒಟ್ಟೊಟ್ಟಿಗೆ ಪರದೆಯ ಮು೦ದೆ ತೆರೆದಿಡುತ್ತಾನೆ. ಅ೦ದರೆ ನಮ್ಮ ಕಣ್ಣ ಮು೦ದಿನ ಪರದೆಯು ನಾಲ್ಕು ಭಾಗಗಳಾಗಿ ವಿಭಜನೆಗೊ೦ಡು ನಾಲ್ಕರಲ್ಲೂ ನಾಲ್ಕು ಕಥೆಗಳು ಮೂಡಿ ಬರುತ್ತವೆ, ಅದೂ ಏಕಕಾಲದಲ್ಲಿ.ಯಾವ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಅಥವಾ ಯಾವುದನ್ನು ನೋಡಬೇಕೆ೦ಬುದು ಪ್ರೇಕ್ಷಕನಿಗೆ ಬಿಟ್ಟಿದ್ದು. ನಾಲ್ಕು ಸಿನಿಮಾಗಳನ್ನು ಒ೦ದು ಪರದೆಯ ಮೇಲೆ, ಅದೂ ಏಕಕಾಲದಲ್ಲಿ  ತೋರಿಸುವ ನಿರ್ದೇಶಕ ಒ೦ದರ ಸ೦ಭಾಷಣೆಯಾಗಲಿ, ಹಿನ್ನೆಲೆ ಸ೦ಗೀತವಾಗಲಿ ಉಳಿದ ಮೂರಕ್ಕೆ ಯಾವುದೇ ರೀತಿಯ ಅಡೆತಡೆ ಉ೦ಟುಮಾಡದ೦ತೆ  ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾನೆ.ಒ೦ದರಲ್ಲಿ ಸ೦ಭಾಷಣೆ ನಡೆಯುವಾಗ ಉಳಿದ ಮೂರರಲ್ಲಿ ಚಟುವಟಿಕೆ ಇಟ್ಟು, ಗೊ೦ದಲಕ್ಕೆಡಮಾಡದ೦ತೆ ನಿರ್ದೇಶಿಸಿರುವ ಮೈಕ್ ಪಿಗ್ಗಿಸ್ ಜಾಣ್ಮೆ ಮೆಚ್ಚತಕ್ಕದ್ದೆ..!
ಹಾಗೇ ಇಲ್ಲಿ ಇನ್ನೂ ಒಂದು ದಾಖಲೆಯಿದೆ. ಈ ನಾಲ್ಕು ಭಾಗಗಳಲ್ಲಿ ಬರುವ ನಾಲ್ಕೂ ಚಿತ್ರಗಳು ಕೇವಲ ಒಂದೇ ಶಾಟಿನಲ್ಲಿ ತೆಗೆದಂತವು. ಅಂದರೆ ನಾಲ್ಕು ಒಂದೂವರೆ ಗಂಟೆಗಳ ಅವಧಿಯ ಸಿಂಗಲ್ ಶಾಟ್ ಚಿತ್ರಗಳನ್ನು ಒಂದೇ ಪರದೆಯ ಮೇಲೆ ಏಕಕಾಲದಲ್ಲಿ ತೋರಿಸುತ್ತಾನೆ ಮೈಕ್ ಪಿಗ್ಗಿಸ್. ಮೊದಲ ನೋಟದಲ್ಲೇ ನಾಲ್ಕೂ ಕಥೆಗಳತ್ತ ಗಮನಹರಿಸಿ ನಾಲ್ಕನ್ನೂ ಅರ್ಥ ಮಾಡಿಕೊಂಡರೆ ಆ ಪ್ರೇಕ್ಷಕ ಕೂಡ ಒಂದು ದಾಖಲೆ ಮಾಡಿದಂತೆ..!!
ಸಿನಿಮಾ ಹೀಗಿದ್ದರೇ ಚೆನ್ನ.ಹೀಗಿರಬೇಕಿತ್ತು..ನಿರ್ದೇಶಕ ಇನ್ನೂ ಚೆನ್ನಾಗಿ ತೆಗೆಯಬೇಕಿತ್ತು  ಎ೦ದೆಲ್ಲಾ ಆದೇಶಗಳನ್ನು  ನೀಡುವ  ಅನ್ನದಾತ ಪ್ರೇಕ್ಷಕ ಪ್ರಭುವಿಗೆ ನೀನು ಚಿತ್ರವನ್ನು ಹೀಗೆಯೇ ನೋಡಬೇಕೆ೦ದು ಹೇಳುವ ಎದೆಗಾರಿಕೆಯ ನಿರ್ದೇಶಕರ ಈ ಚಿತ್ರಗಳು ಬರೀ ಪ್ರಯೋಗಗಳಷ್ಟೇ ಆಗಿರದೇ ಜನಮನ್ನಣೆಗಳಿಸುವುದರ ಜೊತೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನೂ ಬಾಚಿಕೊ೦ಡಿವೆ.ಜೊತೆಗೆ ಸಿನಿಮಾರ೦ಗಕ್ಕೆ ಹೊಸ ಹೊಸ ವ್ಯಾಕರಣ ನೀಡುವಲ್ಲಿ ಯಶಸ್ವಿಯಾಗಿವೆ.   
ಸುಮ್ಮನೇ ಪ್ರಯೋಗಕ್ಕಾದರೂ ಒಮ್ಮೆ ಈ ಸಿನಿಮಾ ನೋಡಿ.  

Wednesday, May 16, 2012

ಪುಟದಿಂದ ಪರದೆಗೆ-2


ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಹಾ ಪಲಾಯನ ಓದುತ್ತಿದ್ದಾಗ ಅದರ ಮುನ್ನುಡಿಯಲ್ಲಿ ಒ೦ದು ಕಡೆ ತೇಜಸ್ವಿಯವರು ಪ್ಯಾಪಿಲಾನ್ ಕಾದಂಬರಿಯ ಹೆಸರನ್ನು ನಮೂದಿಸಿದ್ದರು. ಅದೇಕೋ ಆ ಕಾದಂಬರಿಯನ್ನು ಓದಲೇಬೇಕೆನ್ನಿಸಿ ಇಡೀ ಮೈಸೂರು ಹುಡುಕಾಡಿ ಆ ಕಾದಂಬರಿ ತೆಗೆದುಕೊಂಡಿದ್ದೆ. ಸುಮಾರು ಎರೆಡೆರೆಡು ಬಾರಿ ಓದಿದ್ದೆ. ಅಲ್ಲಿನ ಪಾತ್ರಗಳು, ಸನ್ನಿವೇಶಗಳು ನನ್ನನ್ನು ಬಹುದಿನಗಳವರೆಗೆ ತೀವ್ರವಾಗಿ ಕಾಡಿದ್ದವು. ಕಂಗೆಡಿಸಿದ್ದವು. ಮಾನವಜನಾಂಗದ ಇತಿಹಾಸದ ಪುಟಗಳ ಅಕ್ಷರ ಅಕ್ಷರವೂ ಇಷ್ಟೊಂದು ರಕ್ತಲೇಪಿತವಾಗಿದೆಯಲ್ಲ ಎನಿಸಿತ್ತು.
ಸಾಹಸಿ ಹೆನ್ರಿ ಚಾರಿಯೇರ್
ಈಗಲೂ ಆ ಕಾದಂಬರಿಯ ಪುಟಪುಟದ ವಿವರಗಳು ನನಗೆ ಸ್ಪಷ್ಟವಾಗಿ ಗೊತ್ತಿದೆ.ಕಣ್ಣ ಮುಂದೆ ಅದೆಲ್ಲಾ ನಡೆಯಿತೇನೋ ಅನ್ನುವಷ್ಟರ ಮಟ್ಟಿಗೆ ಆ ಕಾದಂಬರಿಯ ಪ್ಯಾರಾಗಳು ದೃಶ್ಯರೂಪದಲ್ಲಿ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿವೆ.ಮನುಷ್ಯನ ಸ್ವಾತಂತ್ರ್ಯದೆಡೆಗಿನ ಬಯಕೆ ಅದೆಷ್ಟು ಅದಮ್ಯ..ಎನ್ನುವುದರ ಅರಿವಾದದ್ದು ನನಗೆ ಪ್ಯಾಪಿಲಾನ್ ಓದಿದಾಗಲೇ. ಆನಂತರ ಆ ಕಾದಂಬರಿಯ ಆಧರಿಸಿ ಸಿನಿಮಾ ಬಂದಿದೆ ಎಂದು ಗೊತ್ತಾದ ಮೇಲೆ ಹುಡುಕಾಡಿ ಆ ಸಿನಿಮಾದ ಡಿವಿಡಿ ಕೊಂಡು ಅದೆಷ್ಟು ಕಾತರನಾಗಿ ಟಿವಿಯ ಮುಂದೆ ಕುಳಿತಿದ್ದೆನೆಂದರೆ ನನಗವತ್ತು ಪ್ರಳಯವಾಗಿದ್ದರೂ ಗೊತ್ತಾಗುತ್ತಿರಲಿಲ್ಲ. ಆದರೆ ನನಗೆ ಸಿನಿಮಾ ನಿರಾಸೆ ತರಿಸಿತ್ತು. ಆದರೂ ಮತ್ತೆ ನೋಡಿದೆ. ಆಗಲೂ ನಿರಾಸೆಯಾಗಿತ್ತು. ನಾನಂದುಕೊಂಡ, ಆ ಕಾದಂಬರಿಯಾಧಾರಿತ ನನ್ನ ಕಲ್ಪನೆಯ ಮುಖ್ಯವೆನಿಸುವ ದೃಶ್ಯಗಳು ಅಲ್ಲಿರಲೇ ಇಲ್ಲ. ಯಾಕೆ ಹೀಗೆ ಎಂದುಕೊಂಡು ನನ್ನನ್ನೇ ಹಲವಾರು ಬಾರಿ ಪ್ರಶ್ನಿಸಿಕೊಂಡಿದ್ದೆ. ಆನಂತರ ಮತ್ತೆ ಕೆ.ಪಿ.ಯವರೇ ಅನುವಾದಿಸಿದ ಕನ್ನಡದ ಪ್ಯಾಪಿಲಾನ್ ಓದಿದೆ. ಅದ್ಯಾಕೋ ಆ ಸಿನಿಮಾ ನನ್ನನ್ನು ಸೆಳೆಯಲೇ ಇಲ್ಲ. ಆಮೇಲೆ ನನ್ನ ಗೆಳೆಯರಿಗೆ ಈ ಸಿನಿಮಾ ತಕ್ಷಣ ನೋಡಿ, ಇದರ ಬಗ್ಗೆ ಚರ್ಚೆ ಮಾಡೋದಿದೆ ಎಂದು ಹೇಳಿ ಬಲವಂತವಾಗಿ ಅವರು ಸಿನಿಮಾ ನೋಡುವಂತೆ ಮಾಡಿದ್ದೆ. ಅವರಿಬ್ಬರೂ ಸಿನಿಮಾ ನೋಡಿ ಗದ್ಗದಿತರಾಗಿದ್ದರು. ಆ ಸಿನಿಮಾದ ಬಗ್ಗೆ ಸುಮಾರುಹೊತ್ತು ಮಾತಾಡಿದ್ದರು. ಆ ಪ್ಯಾಪಿಲಾನ್ ಇನ್ನೂ ಇದ್ದಾನಾ? ಇದು ನಿಜವಾಗಿಯೂ ಸತ್ಯ ಘಟನೆಯಾ..? ಎಂದೆಲ್ಲಾ ಪ್ರಶ್ನಿಸಿದ್ದರು. ಎಂಥ ಸಿನಿಮಾ ರೆಫರ್ ಮಾಡಿದೆ ಮಾರಾಯ..ನನಗೆ ಆ ಗುಂಗಿಂದ ಹೊರಬರಲು ಸಾಧ್ಯವಾಗಲೇ ಇಲ್ಲ..ಇಲ್ಲಿ ಯಾರನ್ನು ಕೆಟ್ಟವರು ಅನ್ನೋದು..ಯಾರನ್ನು ಒಳ್ಳೆಯವರು ಅನ್ನೋದು..ಏನೇ ಆಗಲಿ ಒಂದು ಅದ್ಭುತ ಮನುಕುಲದ ಸಾಕ್ಷ್ಯಚಿತ್ರ ತೋರಿಸಿದ್ದೀಯಾ..ತುಂಬಾ ತುಂಬಾ ಥ್ಯಾಂಕ್ಸ್ ಕಣೋ.. ಎಂದೆಲ್ಲಾ ನನ್ನನ್ನು ಕೊಂಡಾಡಿದ್ದರು. ನನಗೇ ಆ ಪುಸ್ತಕ ಬೀರಿದ್ದ ಪರಿಣಾಮವನ್ನು ಅಷ್ಟೇ ತೀವ್ರವಾಗಿ ಆ ಸಿನಿಮಾ ಅವರ ಮೇಲೆ ಬೀರಿತ್ತು. ಕಾರಣ ಅವರು ಆ ಪುಸ್ತಕ ಓದಿರಲಿಲ್ಲ.
ಪುಸ್ತಕ ಗಾತ್ರದಲ್ಲೂ, ವಿಷಯದಲ್ಲೂ ದೊಡ್ಡದಾದದ್ದೆ. ಪ್ಯಾಪಿಲಾನನಿಗೆ ನ್ಯಾಯಾಲಯ ಐವತ್ತು ವರುಷಗಳ ಕಠಿಣ ಖಾರಾಗೃಹವಾಸದ ಶಿಕ್ಷೆ ನೀಡಿದಾಗ ಅವನ ವಯಸ್ಸು ಇಪ್ಪತ್ತೈದರ ಆಸುಪಾಸು. ಅದು ತಾನು ಮಾಡದ ತಪ್ಪಿಗೆ! ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂಬುದು ಅವನ ಜೀವನದ ಏಕೈಕ ಗುರಿಯಾಗುತ್ತದೆ. ಆದರೆ ಅದಷ್ಟು ಸುಲಭವಲ್ಲ. ಸುಮಾರು ಹದಿನಾಲ್ಕು ಬಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾದಾಗಲೂ ಅವನಿಗೆ ಮತ್ತಷ್ಟು ಘೋರಶಿಕ್ಷೆಯನ್ನು ವಿಧಿಸಲಾಗುತ್ತದೆ. ಅವೇನೂ ಸಾಮಾನ್ಯ ಶಿಕ್ಷೆಗಳಲ್ಲ. ಅಲ್ಲಿನ ಖೈದಿಗಳು  ರೋಗರುಜಿನಗಳಿಂದ, ಜೈಲಿನೊಳಗಿನ ಆಂತರಿಕ ಕಲಹಗಳಿಂದ ಅಥವಾ ಮಾನಸಿಕ ವೇದನೆಯಿಂದ ಹುಚ್ಚರಾಗಂತೂ ಸತ್ತೇಹೋಗುವಷ್ಟು ಕಠಿಣವಾದ, ಅಮಾನವೀಯವಾದ ಶಿಕ್ಷೆಗಳವು. ಅದೆಲ್ಲವನ್ನೂ ಮೀರಿ ಪ್ಯಾಪಿಲಾನ್ ಬದುಕುತ್ತಾನೆ. ತನ್ನ ದೇಹವನ್ನು, ಮನಸನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾನೆ..ಇದೆಲ್ಲಾ ಸಾಧ್ಯವಾಗುವುದು ಅವನ ಸ್ವಾತಂತ್ರ್ಯದೆಡೆಗಿನ ಅದಮ್ಯ ಬಯಕೆಯಿಂದಾಗಿ..
ಎರಡು ಘಂಟೆ, ಮೂವತ್ತೊಂದು ನಿಮಿಷ ಪ್ಯಾಪಿಲಾನ್ ಸಿನಿಮಾದ ಅವಧಿ. ನಿಜವಾಗಿ ಹೇಳಬೇಕೆಂದರೆ ಇಡೀ ಕಾದಂಬರಿಯನ್ನು ದೃಶ್ಯರೂಪಕ್ಕೆ ತರಲು ಈ ಸಮಯ ಏನೇನೂ ಅಲ್ಲ. ಹಾಗಂತ ಗಂಟೆಗಟ್ಟಲೇ ಸಿನಿಮಾ ಮಾಡಲಾಗುವುದಿಲ್ಲವಲ್ಲ.
ನನ್ನ ಪ್ರಕಾರ ನೀವು ಪುಸ್ತಕ ಓದಿ ಆನಂತರ  ಸಿನಿಮಾ ನೋಡುವುದೊಳ್ಳೆಯದು. ಓದಿಲ್ಲದಿದ್ದರೆ ದಯವಿಟ್ಟು ಒಮ್ಮೆ ಓದಿ.ಇದು ಕಾಲ್ಪನಿಕ ಕಥೆಯಲ್ಲ. ಆತ್ಮಚರಿತ್ರೆ. ಲೇಖಕ ಹೆನ್ರಿ ಚಾರಿಯೆರ್.ಇದು ಅವನದೇ ಬದುಕಿನ ಕಥೆ..ಅವನದೇ ವ್ಯಥೆ..
ಸಿನಿಮಾದ ವಿಷಯಕ್ಕೆ ಬಂದರೆ ಫ್ರಾಂಕ್ಲಿನ್ ಜೆ. ಶಾಫನೆರ್ ಈ ಚಿತ್ರದ ನಿರ್ದೇಶಕ. ಸ್ಟೀವ್ ಮ್ಯಾಕಿನ್, ಡಸ್ಟಿನ್ ಹಾಫಮನ್ ಪ್ರಮುಖ ಪಾತ್ರಧಾರಿಗಳು. 1973ರಲ್ಲಿ ತೆರೆಗೆ ಬಂದ ಈ ಚಿತ್ರ ಆಸ್ಕರ್ ಪ್ರಶಸ್ತಿಗೂ ನಾಮಾಂಕಿತವಾಗಿತ್ತು.ಪಾತ್ರಧಾರಿಗಳ ಅಭಿನಯ, ಲೊಕೇಷನ್‌ಗಳು ಉತ್ತಮವಾಗಿರುವ ಈ ಚಿತ್ರ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

Tuesday, May 15, 2012

ನೋಡಲೇ ಬೇಕಾದ ಚಿತ್ರಗಳು-6



ನಿಮಗೆ ನಿರ್ದೇಶಕ ಸ್ಟ್ಯಾನ್ಲಿಕ್ಯೂಬ್ರಿಕ್ ಗೊತ್ತಿರಬಹುದು.ಕ್ಲಾಕ್ವರ್ಕ್ ಆರೇಂಜ್,2001-ಸ್ಪೇಸ್ ಒಡಿಸ್ಸಿ,ದಿ ಶೈನಿಂಗ್ ಆತನ ಪ್ರಸಿದ್ಧ ಚಿತ್ರಗಳು. ಇದೇ ನಿರ್ದೇಶಕನ ಅತ್ಯುತ್ತಮ ಪ್ರೇಮಕಥೆಯನ್ನು ಹೊಂದಿರುವ ಚಿತ್ರವೇ ಲೋಲಿಟಾ. 1962ರಲ್ಲಿ ತೆರೆಗೆ ಬಂದ ಈ ಚಿತ್ರ ಕಾದಂಬರಿ ಅಧಾರಿತ. ಇದೇ ಕಾದಂಬರಿ ಆಧರಿಸಿ 1997ಲ್ಲೂ ಒ೦ದು ಲೋಲಿಟಾ ತೆರೆಗೆ ಬಂದಿದೆ. ಆದರೆ ಅದು ಯಾವ ದೃಷ್ಟಿಯಿಂದಲೂ ಸ್ಟ್ಯಾನ್ಲಿಕ್ಯೂಬಿಕ್ ನ ಲೋಲಿಟಾಗೆ ಸಮವಿಲ್ಲ.
ಪ್ರೀತಿ-ಪ್ರೇಮಕ್ಕೆ ಕಣ್ಣಿಲ್ಲ ಎನ್ನುವ ಮಾತಿನಂತೆಯೇ ಇಲ್ಲಿನ ಕಥೆ ನಡೆಯುತ್ತದೆ. ಚಿತ್ರದ ನಾಯಕ ಒಬ್ಬ ನಡುವಯಸ್ಕ ಪ್ರೊಫೆಸ್ಸರ್. ನಾಯಕಿಯನ್ನು ಮನಸಾರೆ ಪ್ರೀತಿಸುತ್ತಾನೆ.ಅವನ ಪ್ರೀತಿಯಲ್ಲಿ ಅದೆಷ್ಟು ಉತ್ಕಟತೆ ಇರುತ್ತದೆಯೆಂಬುದನ್ನು ನೋಡಿಯೇ ಅನುಭವಿಸಬೇಕು. ಅವಳ ಪ್ರೀತಿ ಪಡೆಯಲು ಏನನ್ನ ಬೇಕಾದರೂ ಕಳೆದುಕೊಳ್ಳಲು, ತ್ಯಾಗ ಮಾಡಲು, ಸಂಪಾದಿಸಲು ಪ್ರೊಫಸ್ಸರ್ ರೆಡಿ. ಅವನಿಗೆ ಅವಳ ಸಾಂಗತ್ಯ ಬೇಕು, ಪ್ರೀತಿ ಬೇಕು, ಯಾವಾಗಲೂ ಅವಳು ಆತನ ಜೊತೆಯೇ ಇರಬೇಕು...ಇದವನ ಪರಮ ಬಯಕೆ. ಆದರೆ ಲೋಲಿಟಾ ..!! ಆಕೆಗೆ ಪ್ರೊಫಸರ್ ನನ್ನು ಆ ದೃಷ್ಟಿಯಿಂದ ನೋಡಲು ಸಾಧ್ಯವೇ ಆಗುವುದಿಲ್ಲ. ವಯಸ್ಸಿನಲ್ಲಿ ತನಗಿಂತ ಎರಡು ಪಟ್ಟಿಗೂ ಹಿರಿಯನಾದವನ ಮೇಲೆ ಆ ಭಾವ ಹುಟ್ಟುವುದಾದರೂ ಹೇಗೆ..?  ಆದರೆ
ಸ್ಟ್ಯಾನ್ಲಿಕ್ಯೂಬ್ರಿಕ್
ನಾಯಕ ಬಿಡಬೇಕಲ್ಲ. ಆಕೆಯ ಹತ್ತಿರವಾಗುವುದಕ್ಕಾಗಿಯೇ ಆಕೆಯ ವಿಧವೆಯಾದ ತಾಯಿಯನ್ನು ಮದುವೆಯಾಗುತ್ತಾನೆ. ಆಮೇಲೆ ಆಕೆಯನ್ನೇ ಕೊಲ್ಲಲು ಯೋಚಿಸುತ್ತಾನೆ..ಈ ಎಲ್ಲಾ ಪ್ರಯತ್ನಗಳಿಂದ ಅವನು ಲೋಲಿಟಾಳ ಪ್ರೀತಿಯನ್ನು ಗೆಲ್ಲುತ್ತಾನಾ..?
1962ರ ಪೋಸ್ಟರ್
ಇಡೀ ಸಿನೆಮಾ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಅದ್ಭುತವಾದ ಹಿನ್ನೆಲೆ ಸಂಗೀತ ಈ ಚಿತ್ರದ ಪ್ರಮುಖ ಆಸ್ತಿ. ಹಾಗೆ ಕಲಾವಿದರೆಲ್ಲರ ಮನೋಜ್ಞ ಅಭಿನಯ, ಕ್ಯೂಬ್ರಿಕ್‌ನ ಸಮರ್ಥ ನಿರ್ದೇಶನ ಒಂದು ಸಾಮಾನ್ಯ ಚಿತ್ರವನ್ನು ಮಹೋನ್ನತ ಚಿತ್ರವನ್ನಾಗಿ ಮಾಡಿದೆ ಎಂದರೆ ತಪ್ಪಾಗಲಾರದು. ಚಿತ್ರದ ಕೊನೆಯಲ್ಲಿ ನಾಯಕನ ಅಭಿನಯ ನಿಮ್ಮ ಕಣ್ಣಂಚಿನಲ್ಲಿ ಒಂದೆರೆಡು ಕಂಬನಿ ಮಿಡಿಸದಿದ್ದರೆ ಕೇಳಿ..ಎರಡೂವರೆ ಘಂಟೆಗಳ ಈ ಸಿನೆಮಾವನ್ನು ತಪ್ಪದೇ ನೋಡಿ. ಹಾಗೆಯೇ ಸಮಯವಿದ್ದರೆ, ಕುತೂಹಲವಿದ್ದರೆ 1997ರ ಲೋಲಿಟಾವನ್ನೂ ನೋಡಿ

.
 


Sunday, May 13, 2012

ಅಪರೂಪದ ನಿರ್ದೇಶಕರು-1


ಚಿತ್ರಗಳಲ್ಲಿ ನನಗಿಷ್ಟವಾದ genre ಎಂದರೆ ನಾನ್ ಲೀನಿಯರ್ ಅಥವಾ ಅಂಕುಡೊಂಕು ನಿರೂಪಣೆಯನ್ನು ಹೊಂದಿರುವ ಚಿತ್ರಗಳು.ಜಾಗತಿಕ ಸಿನಿಮಾಗಳಲ್ಲಿ ಮೊದಮೊದಲಿಗೆ ವಿಭಿನ್ನ ಎನಿಸಿದ್ದೇ ಈ ಚಿತ್ರಗಳು.ಯಾವುದೋ ಒ೦ದು ಕಥೆಯನ್ನು ನೇರವಾಗಿ ಹೇಳದೆ ಅದನ್ನ ತಿರುಚಿ-ಮುರುಚಿ ಹೇಳಿದಾಗ ಅದು ಹೆಚ್ಚು ಪರಿಣಾಮಕಾರಿ ಎನಿಸಿದ್ದು ನಿಜ..ಅಲೆನ್ ರೆಸ್ನಾಯಿಸ್ ಎಂಬ ರಷಿಯನ್ ಚಲನಚಿತ್ರ ನಿರ್ದೇಶಕನೊಬ್ಬ ಮೊದಮೊದಲಿಗೆ ದಿ ಲಾಸ್ಟ್ ಇಯರ್ ಅಟ್ ಮರೀನಾಬಾದ್[1961] ಎಂಬ ವಿಚಿತ್ರ ನಿರೂಪಣೆಯ ಚಿತ್ರವೊ೦ದನ್ನು ತೆರೆಗೆ ಕೊಟ್ಟಾಗ ವೀಕ್ಷಕರು ವಿಮರ್ಶಕರು ದಂಗುಬಡಿದೆದ್ದು ಹೋಗಿದ್ದರಂತೆ..ಹಾಗೆ ಕ್ರಿಸ್ಟೋಪರ್ ನೋಲನ್‌ಫಾಲೋಯಿಂಗ್, ಮೆಮೆಂಟೋ ಹಾಗೆ ಇತ್ತೀಚಿನ ಇನ್ಸೆಪ್ಷನ್ ಚಿತ್ರಗಳನ್ನು ನೋಡಿದಾಗ ಯಾರೇ ಆದರೂ  ನಿರ್ದೇಶಕನ ಕ್ರಿಯಾಶೀಲತೆಗೆ , ಚಿಂತನಾ ಶೈಲಿಗೆ ಮಾರು ಹೋಗದಿರಲು ಸಾಧ್ಯವಿಲ್ಲ..
ಒಬ್ಬೊಬ್ಬ ನಿರ್ದೇಶಕ ಅವನದೇ ಆದ ನಿರೂಪಣಾ ಶೈಲಿಯಿ೦ದ, ಕಥಾ ಆಯ್ಕೆಯಿ೦ದ ಗುರುತಿಸಿಕೊಳ್ಳುತ್ತಾನೆ. ಹಿಚ್ ಕಾಕ್  ತನ್ನ ಪತ್ತೆಧಾರಿ, ಸಸ್ಪೆನ್ಸ್ ಚಿತ್ರಗಳಿ೦ದ ಯಶಸ್ವಿಯಾಗಿ ಮನೆಮಾತಾದರೆ ಜಾನ್ ಕಾರ್ಪೆ೦ಟರ್ ತನ್ನ ಹಾರರ್, ಮಿಸ್ಟರಿ ಸಿನೆಮಾಗಳಿ೦ದ  ಗುರುತಿಸಿಕೊ೦ಡಿದ್ದಾನೆ.ನಿರ್ದೇಶಕರು, ಅವರ ಶೈಲಿ, ಅವರ ಮಾಸ್ಟರ್ ಪೀಸ್ ಗಳ ಬಗ್ಗೆ ಲೇಖನವನ್ನ ಕನ್ನಡದ ನಿರ್ದೇಶಕ ಉಪೆ೦ದ್ರರಿ೦ದಲೇ ಪ್ರಾರ೦ಭಿಸೋಣ . ಒಮ್ಮೆ ಉಪ್ಪಿ ಚಿತ್ರರಂಗದಲ್ಲಿ ಬೆಳೆದುಬಂದ ಹಾದಿ ಗಮನಿಸಿದರೇ ಅಚ್ಚರಿಯಾಗದೇ ಇರದು.ನನಗಂತೂ ಉಪ್ಪಿ ಒಬ್ಬ ನಿರ್ದೇಶಕನಾಗಿ ಅದ್ಭುತ.ಸುಮ್ಮನೆ ಗಮನಿಸಿ.ಅವರ ಮೊದಲ ಚಿತ್ರ ತರ್ಲೆ ನನ್ಮಗ.ಒ೦ದು ಕಡಿಮೆವೆಚ್ಚದ ಹಾಸ್ಯ ಚಿತ್ರ.ಅದರ ಹಿ೦ದೆಯೇ ಬಂದಂತಹ ಚಿತ್ರ ಶ್.ಕುತೂಹಲ ಕೆರಳಿಸುವ ಕಥಾವಸ್ತುವನ್ನೊಂದಿರುವ ಚಿತ್ರ.ಹೊಸನಾಯಕ, ಹೊಸನಾಯಕಿ, ಹೊಸ ಸಂಗೀತ ನಿರ್ದೇಶಕ ಹೀಗೆ ಎಲ್ಲಾ ಹೊಸಬರ  
ತಂಡವನ್ನು ಕಟ್ಟಿಕೊಂಡು ನಿದೇಶಿಸಿರುವ ಈ ಚಿತ್ರ ಕನ್ನಡಕ್ಕೆ ಒಂದು ವಿಭಿನ್ನ ಚಿತ್ರವಾಗಿ ಎಲ್ಲರ ಗಮನಸೆಳೆದಿತ್ತು.ಅಪರೇಷನ್ ಅ೦ತ. ಭ್ರಷ್ಟಾಚಾರ, ಅನಾಚಾರದ ವಿರುದ್ಧಾ ಹೋರಾಡುವ ನಾಯಕನ ಚಿತ್ರ.ಅದಾದ ನಂತರದ್ದು ಓಂ.ಬಹುಶ ಭಾರತೀಯ ಚಿತ್ರರಂಗದಲ್ಲಿ ಭೂಗತಲೋಕ ಕಥಾವಸ್ತು ಹೊ೦ದಿರುವ ಚಿತ್ರಗಳಿಗೆ ಹೊಸದಾದ, ವಾಸ್ತವಿಕ ಆಯಾಮ ಕೊಟ್ಟಂತಹ ಚಿತ್ರ. ಹಿಂದಿಯ ರಾಮ್ ಗೋಪಾಲ್ ವರ್ಮಾರ ಸತ್ಯಾ ಚಿತ್ರಕ್ಕೊ ಕನ್ನಡದ ಓಂ ಸ್ಪೂರ್ತಿ ಎಂದು ವರ್ಮಾರೆ ಹೇಳಿಕೊಂಡಿದ್ದಾರೆ.. ಅದಾದ ಮೇಲೆ ಬಂದದ್ದೆ ಉಪೇಂದ್ರ ಮಾಸ್ಟರ್‌ಪೀಸ್ ಎನ್ನಬಹುದಾದ  .ನಾನ್ ಲೀನಿಯರ್ ಚಿತ್ರಕಥೆಯನ್ನು ಹೊಂದಿರುವ ಈ ಚಿತ್ರವನ್ನು ಉಪ್ಪಿ ನಿರ್ದೇಶಿಸಿದ್ದಷ್ಟೇ ಅಲ್ಲ ನಟಿಸಿದ್ದರು ಕೂಡ..ಆನಂತರ ಬಂದ ಚಿತ್ರ ಉಪೇಂದ್ರ..
ನೋಡಿ ..ಒ೦ದು ಚಿತ್ರದಿ೦ದ ಇನ್ನೊ೦ದು ಚಿತ್ರಕ್ಕೆ genre ಯನ್ನು ಬದಲಿಸುತ್ತಲೇ ಹೋದರು ಉಪೇಂದ್ರ.ಇಪ್ಪತ್ತು ವರ್ಷಗಳ ಹಿಂದೆಯೇ ಇಷ್ಟೊ೦ದು innovative ಆಗಿ , ವಿಭಿನ್ನವಾಗಿ ಯೋಚಿಸಿದ ನಿರ್ದೇಶಕ ಉಪೇಂದ್ರ.
 ಈವತ್ತು ನಾವು ವಿಶಿಷ್ಟ ನಿರ್ದೇಶಕರು ಎಂದರೇ ಒ೦ದಷ್ಟು ಹಾಲಿವುಡ್, ಬಾಲಿವುಡ್ ನಿರ್ದೇಶಕರ ಪಟ್ಟಿಯನ್ನೆ ಕೊಡುತ್ತೇವೆ. ಅವರಿಗೆ ಸಿಕ್ಕಂತಹ ಮಾನ್ಯತೆ ಕನ್ನಡದ ನಿರ್ದೇಶಕರಿಗೆ ವಿಶೇಷವಾಗಿ ಉಪ್ಪಿಗೆ ಸಿಗದಿದ್ದದು ಬೇಸರದ ಸಂಗತಿಯೆನಿಸುತ್ತದೆ. ಕಾಮಿಡಿ, ಹಾರರ್, ಆಕ್ಷನ್, ಅಂಡರ್ ವರ್ಲ್ಡ್, ಹೀಗೆ ಉಪ್ಪಿಯ ಪಟ್ಟಿಯಲ್ಲಿರುವ ಮೊದಲ ಆರು ಚಿತ್ರಗಳು ಶೈಲಿಯಲ್ಲಾಗಲಿ, ಕಥಾವಸ್ತುವಿನಲ್ಲಾಗಲಿ ನಿರೂಪಣೆಯಲ್ಲಾಗಲಿ ಪ್ರತ್ಯೇಕವಾದಂತವು.ಬೇರಾವ ಭಾಷೆಯಲ್ಲೂ ಒಂದೊಂದು ಚಿತ್ರವನ್ನು ಒ೦ದೊಂದು ಶೈಲಿಯಲ್ಲಿ ನಿರ್ದೇಶಿಸಿದ ಇನ್ನೊಬ್ಬ ನಿರ್ದೇಶಕರನ್ನು ನಾವು ಕಾಣಲಾರೆವು.ಈವತ್ತೇನೋ ನಮಗೆ ಜಗತ್ತಿನ ಎಲ್ಲಾ ಸಿನೆಮಾಗಳು ಅ೦ತರ್ಜಾಲದಿ೦ದ ಸಿಕ್ಕಿಬಿಡುತ್ತವೆ. ಆದರೆ ಉಪೆ೦ದ್ರರ ಸಮಯದಲ್ಲಿ ಬರೀ ಫಿಲಂ ಸೊಸೈಟಿ, ಚಿತ್ರೋತ್ಸವಗಳಲ್ಲಷ್ಟೇ ಜಗತ್ತಿನ ಸಿನೆಮಾಗಳು ಸುಲಭಕ್ಕೆ ಸಿಗುತ್ತಿದ್ದದ್ದು. ಆ ಸಮಯದಲ್ಲೇ ಒ೦ದೊ೦ದು ಸಿನೆಮಾದ ನಿರೂಪನೆಯನ್ನು, ಕಥೆಯನ್ನೂ ವಿಭಿನ್ನವಾಗಿ ಯೋಚಿಸಿದ, ಚಿತ್ರರಸಿಕರ ಮು೦ದಿಟ್ಟ ಅಪರೂಪದ ನಿರ್ದೇಶಕ ಉಪ್ಪಿ.