Saturday, June 2, 2012

ನೋಡಲೇಬೇಕಾದ ಚಿತ್ರಗಳು-8


ನಿಮಗೆ ಒ೦ದು ಅತ್ಯುತ್ತಮ ಚಿತ್ರ ನೋಡುವ ಬಯಕೆ ಇದೆಯೇ?
ಹಾಗಾದರೆ ಐದು ಗ೦ಟೆ ಹದಿನೈದು ನಿಮಿಶಗಳನ್ನು ಪಕ್ಕಕ್ಕೆತ್ತಿಟ್ಟುಬಿಡಿ.
ಚಿತ್ರ ನನಗೆ ಸಿಕ್ಕಿದ್ದು ಆಕಸ್ಮಿಕವಾಗಿ. ಇಟಲಿಯ ಖ್ಯಾತ ಮತ್ತು ನನಗೆ ಭಾರಿ ಇಷ್ಟವಾದ ನಿರ್ದೇಶಕ ಗಿಸೆಪ್ ಟಾನೇಟರ್ ನ ದಿ ಲೆಜೆಂಡ್ ಆಫ್ 1900 ಚಿತ್ರಕ್ಕಾಗಿ ಹುಡುಕಾಡುತ್ತಿದ್ದೆ. ಎಲ್ಲಾ ಡಿವಿಡಿ ಅಂಗಡಿಗಳಲ್ಲೂ ವಿಚಾರಿಸುತ್ತಿದ್ದೆ. ಅಂತಹ ಸಂದರ್ಭದಲ್ಲಿ ಹೆಸರಿನ ಗೊಂದಲದಿಂದಾಗಿ ಎರಡು ಡಿವಿಡಿ ಡಿಸ್ಕ್ ಗಳಿದ್ದ ಈ ಚಿತ್ರದ ಡಿವಿಡಿ ನನಗೆ ದೊರಕಿತು. ಮೊದಲಿಗೆ ಇದು ಗಿಸೆಪಿಯ  ದಿ ಲೆಜೆಂಡ್ ಆಫ್ 1900 ಎಂದುಕೊಂಡೇ ಮನೆಗೆ ತಂದು ಟಿವಿ ಮುಂದೆ ಪ್ರತಿಷ್ಠಾಪಿತನಾದವನಿಗೆ ತೆರೆದುಕೊಂಡಿದ್ದು ಬೇರೆಯದೇ ಲೋಕ.ಚಿತ್ರದ ಟೈಟಲ್ ಕಾರ್ಡ್ ನಿಂದಲೇ ನನಗೆ ಗೊತ್ತಾಗಿ ಹೋಗಿತ್ತು ಇದು ನಾನಂದುಕೊಂಡ  1900 ಅಲ್ಲ. ಯಾಕೆಂದರೆ ಆ ಚಿತ್ರದ ಹೀರೋ ಟಿಮ್‌ರೋತ್. ಕ್ವಿಂಟನ್ ಟರೆಂಟಿನೋನ ಚಿತ್ರಗಳಲ್ಲಿ ಕಂಡುಬರುವ ನಟ ಉತ್ತಮ ಕಲಾವಿದ. ಪಲ್ಪ್ ಫಿಕ್ಷನ್ ಆಗಿರಬಹುದು, ಅಥವ ರಿಸಾರ್ವಯರ್ ಡಾಗ್ಸ್ ಆಗಿರಬಹುದು ಟಿಮ್ ರೋತ್ ಪಾತ್ರ ಚಿಕ್ಕದಾದರೂ ಅಭಿನಯದ ಛಾಪನ್ನು ಮಾತ್ರ ಮರೆಯುವ ಹಾಗಿಲ್ಲ ! ಸ್ವಲ್ಪ ಬೇಸರವಾದರೂ ಇರಲಿ ಹತ್ತು ನಿಮಿಷ ನೋಡೋಣ ಎಂದು ಕುಳಿತುಕೊಂಡಿದ್ದು. ಅನಾಮತ್ತು 5 ಘಂಟೆ 12 ನಿಮಿಷ ಅಲುಗಾಡದಂತೆ ಹಿಡಿದುಕೂರಿಸಿಕೊಂಡಿತ್ತು ಆ ಸಿನಿಮಾ. ಸಿನಿಮಾ ಮುಗಿದ ಸುಮಾರು ಹೊತ್ತು ಮನೆಯಲ್ಲಿ ಹಾಗೆಯೇ ಕುಳಿತುಬಿಟ್ಟಿದ್ದೆ. 5 ಘಂಟೆ 12 ನಿಮಿಷ ಕುತೂಹಲಕಾರಿಯಾಗಿ ನೋಡಿಸಿಕೊಂಡು ಹೋಗುವ ಸಿನಿಮಾವನ್ನು ನಾನು ನೋಡಿದ್ದು ಮೊದಲನೇ ಸಲ ! ನನ್ನ ದೀರ್ಘಾವಧಿ ಸಿನಿಮಾಗಳನ್ನು ನೋಡಿದ ಲಿಸ್ಟಿನಲ್ಲಿರುವ ಮೊದಲ ಚಿತ್ರವಿದು. ಈಗಲೂ ಬೇಸರವಾದಾಗ ಈ ಸಿನಿಮಾ ಹಾಕಿಕೊಂಡು ನೋಡುತ್ತೇನೆ. ಅಥವ ಧಾರವಾಹಿಯ ಹಾಗೆ ದಿನಕ್ಕೊಂದು ಘಂಟೆಯವರೆಗೆ, ವಾರದ  ಐದು ದಿನವೂ ನೋಡುತ್ತೇನೆ. ಬರ್ನಾಡೋ ಬಾರ್ಟೊಲುಸಿ ಎಂಬ ನಿರ್ದೇಶಕನಿಗೆ ನಿಜಕ್ಕೂ ಹ್ಯಾಟ್ಸ್ ಆಫ್!
1900 ಇಟಾಲಿಯನ್ ಭಾಷಾ ಚಲನಚಿತ್ರ.
1900 ಇಟಲಿಯಲ್ಲಿ 20 ನೇ ಶತಮಾನದ ಮಧ್ಯಭಾಗದಲ್ಲಿ ನಡೆಯುವ ಕಥಾಹಂದರವನ್ನು ಹೊಂದಿದೆ. ಇಬ್ಬರು ಸಮಾಜದ ವಿಭಿನ್ನ ಸ್ಥರಗಳಿಂದ ಬಂದಂತಹ ಗೆಳೆಯರ ನಡುವಿನ, ಗೆಳೆತನದ  ನಡುವಿನ ಸಂಘರ್ಷದ ಕಥೆಯೇ 1900.
1900 ಇಸವಿಯ ಮೊದಲ ದಿನವೇ ಜನಿಸಿದ ಇಬ್ಬರೂ ಗೆಳೆಯರು ಆಲ್ಫ್ರೆಡ್ ಮತ್ತು ಡಾಲ್ಕೊ. ಇಬ್ಬರೂ ಸಮಾಜದಲ್ಲಿನ ಎರಡು ವಿರುದ್ಧ ಧಿಕ್ಕುಗಳಿಂದ ಬಂದವರು. ಆಲ್ಫ್ರೆಡೋ ಊರಿನ  ದೊಡ್ಡ ಜಮೀನುದಾರನ ಮಗನಾದರೆ ಡಾಲ್ಕೊ ಅದೇ ಜಮೀನಿನಲ್ಲಿ ಕೆಲಸ ಮಾಡುವ ಕೂಲಿಕಾರನ ಮಗ. ಆದರೆ ತಮ್ಮ ಜಾತಿ ಅಂತಸ್ತುಗಳನ್ನು ಮೀರಿದ ಗೆಳೆತನ ಇಬ್ಬರದು. ಬಾಲ್ಯದಿಂದಲೇ ಜಮೀನುದಾರ ಮತ್ತು ಊಳಿಗೆದಾರರ ನಡುವಿನ ಹೋರಾಟವನ್ನು ನೋಡುತ್ತಾ ಬೆಳೆಯುವ ಗೆಳೆಯರು ಬೆಳೆಯುತ್ತಿದ್ದಂತೆ ಕೆಲವು ವರ್ಷ ಅನಿವಾರ್ಯ ಕಾರಣಗಳಿಂದ ಬೇರೆ ಬೇರೆಯಾಗಬೇಕಾಗುತ್ತದೆ. ಡಾಲ್ಕೊ ಸೇನೆಗೆ ಹೋಗಿಬಿಡುತ್ತಾನೆ. ಆಲ್ಫ್ರೆಡೊ ಊರಿನಲ್ಲೇ ಉಳಿದು ತಂದೆಯ ನಂತರ ಜಮೀನಿನ ಆಗುಹೋಗುಗಳನ್ನು ನೋಡಿಕೊಳ್ಳತೊಡಗುತ್ತಾನೆ. ಸೇನೆಯಿಂದ ಹಿಂದಿರುಗಿ ಬರುವ ಡಾಲ್ಕೊ, ಆಲ್ಫ್ರೆಡೊ ನನ್ನು ಬೇಟಿಯಾಗುತ್ತಾನೆ. ಇಬ್ಬರೂ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾರೆ.... ಆದರೆ ಸಮಾಜದ ವ್ಯವಸ್ಥೆ ಅವರಿಬ್ಬರ ಗೆಳೆತನದ ನಡುವೆ ದೊಡ್ಡಗೋಡೆಯಾಗಲು ಪ್ರಾರಂಭಿಸುತ್ತದೆ. ಕ್ರಾಂತಿಕಾರಿ ಧೋರಣೆಯ ಡಾಲ್ಕೋ ಜಮೀನುದಾರ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾನೆ. ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾನೆ. ಈಗ ಆಪ್ತಗೆಳೆಯರಿಬ್ಬರೂ ರಣರಂಗದಲ್ಲಿ ಎದುರೆದುರು ನಿಂತುಕೊಳ್ಳಬೇಕಾದ ಸಂದರ್ಭ ಬಂದುಬಿಡುತ್ತದೆ.. ಮುಂದೇನಾಗುತ್ತದೆ. ಸ್ನೇಹ-ಕ್ರಾಂತಿಯ ನಡುವಿನ ಸಂಘರ್ಷದಲ್ಲಿ ಯಾವುದು ಗೆಲ್ಲುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ದಯವಿಟ್ಟು ಸಿನಿಮಾ ನೋಡಿ !
ಸಿನಿಮಾದ ನಿರೂಪಣೆ ನಿಮಗೆಲ್ಲೂ ಬೋರ್ ತರಿಸುವುದಿಲ್ಲ. ಮೊದ ಒಂದು ಘಂಟೆಗೂ ಹೆಚ್ಚು ಅವಧಿ ಗೆಳೆಯರ ಬಾಲ್ಯದ ದಿನಗಳ ತುಂಟಾಟದಲ್ಲೇ ಕಳೆದುಹೋಗುತ್ತದೆ. ಈ ಒಂದು ಘಂಟೆಯ ಅವಧಿಯಲ್ಲಿ ನಡೆಯುವ ಘಟನೆಗಳು ಅವರ ಗೆಳೆತನದ ಗಟ್ಟಿತನವನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುತ್ತದೆ. ಹಾಗೆ ಊಳಿಗಮಾನ್ಯ ಪದ್ಧತಿಯ ಒಳಹೂರಣವನ್ನು ಬಿಚ್ಚಿಡುತ್ತಾ ಕ್ರಾಂತಿಯ ಕಿಡಿಯು ಯಾವಾಗಲಾದರೂ ಸಿಡಿಯಬಹುದೆಂಬ ಸೂಚನೆ ಕೊಡುತ್ತದೆ.
ಇಲ್ಲಿ ಪ್ರಶಂಸಿಸಬೇಕಾದದ್ದು ನಿರ್ದೇಶಕ ಬರ್ಟಲೂಸಿಗೆ. ಅವನು ಚಿತ್ರೀಕರಿಸಿರುವ ಪರಿಗೆ. ೧೯೭೫ರಲ್ಲೇ ತಾಂತ್ರಿಕವಾಗಿ ತುಂಬಾ ಶ್ರೀಮಂತವಾಗಿ ಚಿತ್ರವನ್ನು ನಿರ್ದೇಶಿಸಿದ್ದಾನೆ. ದಂಗೆಯ ಸಮಯದಲ್ಲಿ ಕ್ರಾಂತಿಕಾರಿಯೊಬ್ಬ ತನ್ನ ಕಿವಿಯನ್ನೆ ಕತ್ತರಿಸಿ ಜಮೀನುದಾರನ ಕೈಗೆ ಕೊಡುವ ದೃಶ್ಯ ಒಂದೇ ಶಾಟ್ ನಲ್ಲಿದೆ. ಅದೆಷ್ಟು ನೈಜವಾಗಿ ಬಂದಿದೆಯೆಂದರೆ ನಿಜವಾಗಿಯೂ ಕಿವಿ ಕತ್ತರಿಸಿ ಕೊಟ್ಟುಬಿಟ್ಟನೇನೋ ಎಂಬ ಭಾವ ಮೂಡಿಸುತ್ತದೆ. ಹಾಗಿದೆ ದೃಶ್ಯ ವೈಭವ.
ಆಲ್ಫೆಡೊ ಪಾತ್ರ ನಿರ್ವಹಿಸಿರುವ ನಟ ರಾಬರ್ಟ್ ಡಿ ನೀರೋ ತುಂಬಾ ಲೀಲಾ ಜಾಲವಾಗಿ ಹಾಗೂ ನಿರ್ಭಿಡೆಯಿಂದ ಪಾತ್ರ ನಿರ್ವಹಿಸಿದ್ದಾನೆ. ತುಂಬಾ ಅಸಡ್ಡೆಯ, ಮೋಜುಗಾರನಾಗಿ,ಬೇಜವಾಬ್ದಾರಿ ಯುವಕನಾಗಿ,ಮೊದಲಾರ್ಧದವರೆಗೂ ಸಾಗುವ ಪಾತ್ರವನ್ನು ಅಷ್ಟೇ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾನೆ. ಜೆರಾರ್ಡ್ ಡೆಪಾರ್ಡು, ಓಲ್ಮೊ ಡಾಲ್ಕೋ ನ ಪಾತ್ರಕ್ಕೆ ಪರಕಾಯ ಪ್ರವೇಶ  ಮಾಡಿದ್ದಾನೆ.
ಸಿನಿಮಾದ ಬಗ್ಗೆ ಸಂಕ್ಷಿಪ್ತ ವಿವರ :
ನಿರ್ದೇಶನ : ಬರ್ನಾಡೋ ಬಾರ್ಟೋಲುಸಿ
ನಿರ್ಮಾಪಕ : ಆಲ್ಬರ್ಟೊ ಗ್ರಿಮಾಡಿ
ತಾರಾಗಣ : ರಾಬರ್ಟ್ ಡಿ ನೀರೋ, ಜೆರಾರ್ಡ್ ಡೆಪಾರ್ಡಿಯೂ, ಡೊಮಿನಿಕ್ ಸಾಂಡಾ, ಡೊನಾಲ್ಡ್ ಸುದರ್ಲ್ಯಾಂಡ್.
ಸಂಗೀತ :  ಎನಿಯೋ ಮೊರಿಕೋನ್
ಛಾಯಾಗ್ರಹಣ : ವಿಟ್ಟೋರಿಯೋ ಸ್ಪೊರಾರೋ
ಬಿಡುಗಡೆಯ ದಿನಾಂಕ : ಆಗಸ್ಟ್ 15, 1976
ಅವಧಿ : ಇಟಲಿ - 311 ನಿಮಿಷಗಳು
       ಡೆನ್ಮಾರ್ಕ್ - 302 ನಿಮಿಷಗಳು
     ಯು.ಎಸ್.ಎ - 311ನಿಮಿಷಗಳು
ದೇಶ : ಇಟಲಿ
ಭಾಷೆ : ಇಟಾಲಿಯನ್, ಇಂಗ್ಲಿಷ್
ಕೊಸರು : ಚಿತ್ರದ ಚಿತ್ರಕಥೆಯನ್ನು ಕಾಲಗಳ ಆಧಾರದ ಮೇಲೆ ರಚಿಸಲಾಗಿದೆ. ಉದಾಹರಣೆಗೆ ಮಕ್ಕಳು ಒಬ್ಬರನ್ನೊಬ್ಬರು ಬೇಸಿಗೆ ಕಾಲದಲ್ಲಿ ಸಂಧಿಸಿದರೆ, ಮಳೆಗಾಲದಲ್ಲಿ ಯುವಕರಾದ ಗೆಳೆಯರು ಬೇಟಿಯಾಗುತ್ತಾರೆ. ಮತ್ತು, ದಂಗೆ ನಡೆದು ಜಮೀನಿನ ಆಕ್ರಮಣ ಚಳಿಗಾಲದಲ್ಲಿ ನಡೆದರೆ, ಎರಡನೇ ಮಹಾಯುದ್ಧವನ್ನು ವಸಂತಕಾಲದಲ್ಲಿ ತೋರಿಸಲಾಗಿದೆ.

Thursday, May 31, 2012

ಆಸ್ಕರ್ ಕಣದ ಚಿತ್ರಗಳು-2

ಹ್ಯುಗೊ ಕೂಡ ಉತ್ತಮ ತಾಂತ್ರಿಕ ವಿಭಾಗಗಳಲ್ಲಿ ಐದು ಆಸ್ಕರ್ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡ ಅತ್ಯುತ್ತಮ ಚಿತ್ರ. ಈ ಸಿನೆಮಾದ ಕಥೆ ಕಾಲ್ಪನಿಕವಾದುದಲ್ಲ. ನಿರ್ದೇಶಕ ಮೆಲಿಸ್ ನ ಜೀವನಚಿರಿತ್ರೆಯಾಧಾರಿತ ಚಿತ್ರ. ಸ್ವತ: ಮ್ಯಾಜಿಸಿಯನ್ ಆಗಿದ್ದ ಮೆಲಿಸ್ ಚಿತ್ರರ೦ಗದಲ್ಲಿ ಹಲವಾರು ಇಭಿನ್ನ ಪ್ರಯತ್ನಗಳನ್ನೂ ಮಾಡಿದ. ತಂತ್ರ ಜ್ಞಾನ ತೀರ ಹಿಂದುಳಿದಿದ್ದ ಕಾಲದಲ್ಲೇ ದೃಶ್ಯ ವೈಭವ ಅಥವಾ VISUAL EFFECTSಗೆ ತಲೆ ಕೆಡಿಸಿಕೊಂಡು ಹಲವಾರು ಭ್ರಾಮ್ಯ ಕಥಾನಕಗಳುಲ್ಲ ಸಿನೆಮಾಗಳನ್ನ ತಯಾರಿಸಿದ. ಅವನ TRIP TO THE MOON ಚಿತ್ರ  ಅದರಲ್ಲಿ ಅತುತ್ತಮ ಚಿತ್ರಗಳಲ್ಲಿ ಒ೦ದು. ಆನಂತರ ದಿನಗಳಲ್ಲಿ ಮಹಾಯುದ್ಧ , ಸರಕಾರಗಳ ಅರಾಜಕತೆ, ಅಸ್ಥಿರತೆಗಳು ಆತನ ಸಿನಿಮಾದಿಂದ ದೂರವಿರುವಂತೆ ಮಾಡಿದ್ದವು. ತನ್ನದೆಲ್ಲವನ್ನೂ ಮಾರಿ, ಉಳಿದದ್ದನ್ನು ಸುಟ್ಟಾ ಕಿ ರೈಲು ನಿಲ್ದಾಣವೊ೦ದರಲ್ಲಿ ಆಟಿಕೆಗಳನ್ನು ಮಾರುವ ಅ೦ಗಡಿಯಿಟ್ಟುಕೊ೦ಡು ಬದುಕಲು ತೊಡಗುತ್ತಾನೆ ಮೆಲಿಸ್. ಮತ್ತೆ ಅವನನ್ನು ಅವನ ಹಿಂದಿನ ರ೦ಗು ರ೦ಗಿನ  ಪ್ರಪ೦ಚಕ್ಕೆ ಕರೆದುಕೊಂಡು ಹೋಗುವವನೆ ಈ ಹ್ಯುಗೊ. ಸಿನಿಮಾ ಬರೆ ತಾಂತ್ರಿಕ ದೃಷ್ಟಿಯಿ೦ದಷ್ಟೇ ಅಲ್ಲ..ಅಭಿನಯ, ಚಿತ್ರಕಥೆಯ ವಿಭಾಗಗಲ್ಲೂ ಅಷ್ಟೇ ಅದ್ಧೂರಿಯಾಗಿದೆ.
ಆದರೆ ಅದೆಲ್ಲವನ್ನೂ ಮೀರಿ ನಮ್ಮನ್ನು ಮ೦ತ್ರ ಮುಗ್ಧರನ್ನಾಗಿ ಮಾಡುವುದು ಸಿನೆಮಾದಲ್ಲಿನ ವಿಷುಯಲ್ ಎಫೆಕ್ಟ್.ಚಿತ್ರದ ಮೊಟ್ಟ ಮೊದಲ ಶಾಟಿನಿ೦ದ  ಪ್ರಾರಂಭವಾಗುವ VFX ನಿಮ್ಮನ್ನು ಮ೦ತ್ರ ಮುಗ್ಧರನ್ನಾಗಿಸದಿದ್ದರೆ ಕೇಳಿ. ಅಂದ ಹಾಗೆ ಸುಮ್ಮನೆ ಮಾತನಾಡುವುದಕ್ಕಿಂತ ನೋಡೇ ಬಿಡಿ.ಈಗಾಗಲೇ ನೋಡಿದ್ದರೆ ಬನ್ನಿ...ಚರ್ಚಿಸೋಣ...ಆ ಚಿತ್ರದಲ್ಲಿ ನನಗೆ ಕಾಣದ, ನಿಮಗೆ ಕ೦ಡ ವಿಶೇಷತೆಗಳನ್ನ ಮಾತಾಡೋಣ...
ಅ೦ದಹಾಗೆ  ಮೆಲೀಸನ ಎ  ಟ್ರಿಪ್ ಟು ಮೂನ್  ಚಿತ್ರ ನೋಡಿದಾಗಲೂ ನಾನು ಅಚ್ಚರಿಗೊ೦ಡಿದ್ದೆ ..ಆ ಕಾಲದಲ್ಲೇ ಗ್ರಾಫಿಕ್ಸ್ ಬಳಕೆ ನನಗೆ ಆಶ್ಚರ್ಯ ತರಿಸಿತ್ತು.
ಹ್ಯುಗೊ  ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ  ದೊಡ್ಡ ಯಶಸ್ಸು ಕಂಡಿಲ್ಲವಾದರೂ ಅದರ ಕೆಲವೊ೦ದು ವಿಶೇಷಗಳು ನಿಮಗಾಗಿ.
** ಇಡೀ ಸಿನೆಮಾದ ದೃಶ್ಯ ವೈಭವದ ಗ್ರಾಫಿಕ್ಸ್ ಗಾಗಿ ವೆಚ್ಚವಾದ ಹಣ ಸುಮಾರು 800 ಮಿಲಿಯನ್ ಡಾಲರುಗಳು..
**ಸಿನೆಮಾದಲ್ಲಿನ ಗ್ರಾಫಿಕ್ಸ್ ನ ಸ೦ಸ್ಕರಣೆಗೆ ಬೇಕಾದ ಅವಧಿ ಸರಿ ಸುಮಾರು 171,015 ಘ೦ಟೆಗಳು.
**ಚೈನಾ , ಥಾಯ್ಲ್ಯಾಂಡ್, ಜರ್ಮನಿ, ಅಮೇರಿಕ, ಇಂಗ್ಲೆಂಡ್  ದೇಶಗಳ 400ಕ್ಕೊ ಹೆಚ್ಚು ತ೦ತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.
**ಪ್ರತಿ ಸಾರಿಯ ಸ೦ಸ್ಕರಣ ಮಾಡಿದಾಗ ತಗಲುತ್ತಿದ್ದ ಬರೆ ವಿದ್ಯುಚ್ಛಕ್ತಿ  ವೆಚ್ಚಾ 35000 ಡಾಲರಿಗೂ ಹೆಚ್ಚು.
**ಇಲ್ಲಿನ ಗ್ರಾಫಿಕ್ಸ್ ನ ಒ೦ದು ದೃಶ್ಯವೇ ಆಗಲಿ ಅದನ್ನು ಒ೦ದೆ ಒ೦ದು ಕಂಪ್ಯೂಟರ್ ನಿ೦ದ ಮಾಡುವುದಾಗಿದ್ದರೆ ಅದರ ಅ೦ತಿಮ ರೂಪ ಪಡೆಯಲು 19.5 ವರ್ಷದ ಸಮಯ ಬೇಕಾಗುತ್ತಿತ್ತ೦ತೆ..
ಹುಗೋ ಚಿತ್ರದ ಟ್ರೈಲರ್
ಎ ಟ್ರಿಪ್ ಟು ದಿ ಮೂನ್ ಚಿತ್ರದ ಟ್ರೈಲರ್