Thursday, November 15, 2012

'ವೇದಾ ಮೇಡಂ ಹಾಗೇಕೆ ಮಾಡಿದರು....?' ಭಾಗ-3

'ನಿಂಗೆ ಗೊತ್ತಿಲ್ಲಾ ಗುರು...ಹುಡುಗೀರು ಅಂದ್ರೆ ಸುಮ್ನೆ ಅಲ್ಲಾ ..ಅದ್ಕೆ ಹೆಣ್ಣು ಚಂಚಲೆ .ಅನ್ನೋದು...ಯಾವತ್ತೇ ಆಗಲಿ ಯಾರಿಗೆ ಮರುಳಾದ್ರೂ ಹುಡುಗೀರಿಗೆ ಮರುಳಾಗಬಾರದು ನೋಡು ' ಜಗದೀಶ  ಎಗ್ಗುಸಿಗ್ಗಿಲ್ಲದೆ ಮಾತಾಡುತ್ತಿದ್ದ. ಅವನು ಹಾಗೆಯೇ . ಮಾತಾಡಲು ಇಳಿದ ಅಂದರೆ ಮುಗೀತು. ಮಾತಾಡುತ್ತಲೇ ಇರುತ್ತಾನೆ. ಚಿತ್ರವಿಚಿತ್ರವಾಗಿ ವಾದ ಮಾಡುತ್ತಾನೆ. ಏನೇನೋ ಸಮರ್ಥನೆ ಕೊಡುತ್ತಾನೆ. ಅದರಲ್ಲೂ ಹುಡುಗಿಯರ ವಿಷಯ ಬಂತೆಂದರೆ ಸಾಕು ಪುಂಖಾನುಪುಂಖವಾಗಿ ಹೇಳುತ್ತಲೇ ಇರುತ್ತಾನೆ. ಜಗದೀಶ ನನ್ನ ಸಹೋದ್ಯೋಗಿ. ನನಗಿಂತ ಒಂದು ವರ್ಷಕ್ಕೂ ಮುನ್ನವೇ ನಮ್ಮ ಕಂಪನಿ ಸೇರಿದವ. ದಪ್ಪಗಿದ್ದಾನೆ . ಅವನ ದೇಹದ ಯಾವ ಭಾಗದಲ್ಲೂ ಅಧಿಕ ಮಾಂಸವಿರದ ಜಾಗವಿಲ್ಲ . ಅವನ ಪ್ಯಾಂಟಿನ ಅಳತೆಯನ್ನು ನೋಡಿದರೆ ನಮಗೆ ನಗು. ಆದರೆ ಅವನು ಯಾವತ್ತೂ ಇನ್ ಶರ್ಟ್   ಮಾಡದೆ ಬರುವುದಿಲ್ಲ . ಘಂ ಎನ್ನುವ ಸೆಂಟ್ ಪೂಸಿಕೊಲ್ಲದೆ ಆಫೀಸಿಗೆ ಕಾಲಿಡುವುದಿಲ್ಲ .
'ಸರಿಯಪ್ಪಾ ಗುರುವೇ ನೀ ಹೇಳೋದು..ನಿನ್ನನ್ನ ಇದುವರೆಗೂ ಯಾವ ಹುಡುಗಿ ಜೊತೆ ನೋಡಲೇ ಇಲ್ಲ..ಕಸ್ಟಮರ್ ಕೇರ್ ಬಿಟ್ಟರೆ ಬೇರಾವ ಹೆಣ್ಣು ಜೀವಾನೂ ನಿಂಗೆ ಫೋನ್ ಮಾಡಿದ್ದು ನಮಗೊತ್ತಿಲ್ಲಾ ..ಅದೆಂಗೆ ಹುಡುಗೀರ್ ಬಗ್ಗೆ ಇಷ್ಟೊಂದ್ ತಿಳ್ಕೊನ್ಡಿದ್ದೀಯಾ?' ರೋಹಿತ್ ಪ್ರಶ್ನೆ . ರೋಹಿತ್ ನಮ್ಮ ಗುಂಪಲ್ಲೆ ಜಾಲಿಯಾಗಿರುವ ಮನುಷ್ಯ  ಎಲ್ಲರನ್ನೂ ರೇಗಿಸುತ್ತಾನೆ ಅದರಲ್ಲೂ ಜಗದೀಶ್ ಮತ್ತು ರೋಹಿತ್ ಜುಗಲ್ ಬಂದಿ ನಮ್ಮ ಇಡೀ ಗುಂಪನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. 
ರೋಹಿತ್ ನ ಪ್ರಶ್ನೆ ಜಗದೀಶನಿಗೆ ಸರಿಯಾಗಿಯೇ ನಾಟಿದುದಕ್ಕೆ ಎರಡು ಕಾರಣವಿತ್ತು. ಮೊದಲನೆಯದಾಗಿ ಆತನಿಗೆ ಯಾರೂ ಸ್ನೇಹಿತೆಯರೇ ಇರಲಿಲ್ಲ . ನಮ್ಮ ಆಫೀಸಿನಲ್ಲಿ ಯಾರೂ ಅವನ ಜೊತೆ ಮಾತನಾಡುತ್ತಿರಲಿಲ್ಲ . ಗೆಳೆತನ ಬೆಳೆಸಿದರೂ ಎರಡೇ ದಿನಕ್ಕೆ 'ಬೇಜಾನ್ ಇರಿಟೇಟ್ ಮಾಡ್ತಾನೋ.' ಎಂದು ಆರೋಪಿಸುತ್ತಿದ್ದರು. ಅವರು ಒಂದಿಬ್ಬರ ಹತ್ತಿರ ಹಾಗೆ ಹೇಳಿದ್ದರೆ ಜಗದೀಶ ಇಡೀ ಆಫೀಸಿನವರ ಹತ್ತಿರ ' ಆಕೆ ಸರಿಯಿಲ್ಲ.ಲೂಸು..' ಎಂದೆಲ್ಲಾ ಅಪಪ್ರಚಾರ  ಮಾಡಿಬಿಡುತ್ತಿದ್ದ . ಅವನೊಂದಿಗೆ ಗೆಳೆತನ ಹಗೆತನ ಎರಡೂ ಅಪಾಯಕಾರಿಯಾಗಿರುತ್ತಿತ್ತು ಹುಡುಗಿಯರ ಪಾಲಿಗೆ .
ಎರಡನೆಯ ಕಾರಣವೆಂದರೆ  ಕಸ್ಟಮರ್ ಕೇರ್ ಹುಡುಗಿ. ಒಂದು ತಿಂಗಳ ಹಿಂದೆ ಅವನ ಫೋನಿಗೆ ಕಸ್ಟಮರ್ ಕೇರ್ ಹುಡುಗಿಯೊಬ್ಬಳು ಅವಳ ಕಾರ್ಯ ನಿಮಿತ್ತ ಫೋನ್ ಮಾಡಿದ್ದಳು . ಜಗದೀಶ್ ಆಕೆಯ ಜೊತೆ ಚೆನ್ನಾಗಿ ಮಾತನಾಡಿದ್ದ. ಆಕೆ ಆನಂತರ ದಿನದಿನ ಫೋನ್ ಮಾಡಲು ಶುರು ಮಾಡಿದ್ದಳು. ಇವನು ಸ್ವರ್ಗವೇ ಕೈಗೆ ಬಂದಂಗೆ ನಮ್ಮೆಲ್ಲರ ಮುಂದೆ ಜೋರಾಗಿ ಮಾತಾಡುತ್ತಿದ್ದ. 'ಸಿಗಲು ಹೇಳುತ್ತಿದ್ದಾಳೆ ಮಾರಾಯಾ.ನನಗೆ ಹುಡುಗೀರು ಜೊತೆ ಹಾಗೆಲ್ಲಾ ಅಡ್ದಾಡೋಕೆ ಇಷ್ಟ ಇಲ್ಲಾ...' ಎಂದೆಲ್ಲಾ ಜಂಭ ಕೊಚ್ಚಿಕೊಳ್ಳುತಿದ್ದನಾದರೂ ಆಕೆಯ ಫೋನಿಗೆ ಇವನೇ ಕಾಯುತಿದ್ದದ್ದು ನಮಗೆಲ್ಲ ಮೋಜಿನ ಸಂಗತಿಯಾಗಿತ್ತು . ಆಕೆ ಅಕಸ್ಮಾತ್ ಫೋನ್ ಮಾಡದಿದ್ದರೆ ಆವತ್ತೆಲ್ಲಾ ಚಡಪಡಿಸುತ್ತಿದ್ದರೂ ನಮ್ಮಗಳ ಮುಂದೆ ' ಸಧ್ಯ ಇವತ್ತು ಡಿಸ್ಟರ್ಬ್ ಮಾಡ್ತಿಲ್ಲಾ ..ಆರಾಮವಾಗಿ ಕೆಲಸ ಮಾಡಬಹುದು..' ಎಂದೆಲ್ಲ ಜಂಭ  ಕೊಚ್ಚಿಕೊಳ್ಳುತ್ತಿದ್ದ .ದಿನ ಕಳೆದಂತೆ ಅವನ ಆರ್ಭಟ ಹೆಚ್ಚಾಗಿತ್ತು .ಅವರಿಬ್ಬರೂ ಫೋನಲ್ಲೇ ಅಗತ್ಯಕ್ಕಿಂತ ಹೆಚ್ಚಾಗಿ ಮುಂದುವರೆದಿದ್ದರು . ಅದೊಂದು ದಿನ ಇಬ್ಬರೂ ಭೇಟಿಯಾಗಲು  ನಿರ್ಧರಿಸಿದ್ದರು. ಅದಕ್ಕೆಂದೇ ಹೊಸ ಶರ್ಟು ಪ್ಯಾಂಟು ಬೂಟು ವಾಚು  ಎಲ್ಲವನ್ನೂ ಖರೀದಿಸಿದ್ದ. ಭೇಟಿ ಮಾಡಿದರು.. ಆಮೇಲೇನಾಯಿತೋ .. ಭೇಟಿ ಮಾಡಿದ ಮೇಲೆ ಆಕೆ ಇವನ ಜೊತೆ ಗೆಳೆತನ ಮುರಿದುಕೊಂಡಿದ್ದಳು . ಇವನು ಮಾತ್ರ ' ವೇಸ್ಟು ಹುಡುಗಿ ಗುರು..ಬಲೆಗೆ ಹಾಕೊಳೋದಿಕೆ ನೋಡಿದಳು.ನಾನು ಗೊತ್ತಲ್ಲಾ . ..ಅಂತವಕ್ಕೆಲ್ಲಾ...ಊಹೂ...'ಎಂದಿದ್ದನಾದರೂ ನಮಗೆಲ್ಲ ನಿಜ ವಿಷಯ ಗೊತ್ತಿದ್ದರಿಂದ ನಾವು ಅವನನ್ನು ಅವಾಗವಾಗ ರೇಗಿಸುತ್ತಿದ್ದೆವು. 
'ಹೇ...ನೀನೆ  ಹೇಳು .. ಈ ನನ್ಮಗ ಹುಡುಗೀರ್ ಸಿಕ್ದಿರೋಕೆ ಈ ತರಾ ಮಾತಾಡ್ತಿದ್ದಾನೆ ..ಯಾವುದಾದರೂ ಮಹಿಳಸಂಘಕ್ಕೆ ಗೊತ್ತಾಗಬೇಕು... 'ಎಂದ ರೋಹಿತ್ ನನ್ನ ಕಡೆ ನೋಡಿದ. ಅಲ್ಲಿಯವರೆಗೂ ನಾನವರ ಮಾತುಗಳನ್ನು ಕೇಳುತ್ತಿದ್ದೆನಾದರೂ ಮನಸ್ಸು ಮಾತ್ರ ಬೇರೆಲ್ಲೂ ಇತ್ತು .
ನನ್ನನ್ನು ಕಾಡುತ್ತಿದ್ದದ್ದು ಅದೇ ಪ್ರಶ್ನೆ  
'ವೇದಾ  ಹಾಗೇಕೆ  ಮಾಡಿದರು..?'
******************      *********************    ****************
ಆವತ್ತು ಅಲಾರ್ಮ್ ಹೊಡೆದ ನಂತರ ಎಚ್ಚರವಾಯಿತು. ಆಮೇಲೆ  ಮಲಗುವುದಕ್ಕೆ  ಎಷ್ಟೇ ಪ್ರಯತ್ನಿಸಿದರೂ ಮತ್ತೆ ನಿದ್ರೆ ಬರಲೇ ಇಲ್ಲ . ಸುಮ್ಮನೆ ಮಲಗಿ ಮೈತುಂಬಾ ರಗ್ಗು ಹೊದ್ದುಕೊಂಡು ಬೆಚ್ಚನೆಯ ಅನುಭವವನ್ನು ಸವಿಯೋಣ ಎನಿಸಿದರೂ ಅದ್ಯಾಕೋ ಅದೂ ಹಿತ ಎನಿಸಲಿಲ್ಲ . ರಗ್ಗು ಎತ್ತಿ  ಬೀಸಾಡಲಾ  ಎನ್ನಿಸಿತ್ತು. ಅದೆಷ್ಟು ಬೇಗ ಸಮಯವಾಗುತ್ತದೋ ಎನಿಸುತ್ತಿತ್ತು. ಸುಮಾರು ಹೊತ್ತು ಹಾಸಿಗೆಯ ಮೇಲೆಯೇ ಹೊರಳಾಡಿದೆ. ಆಮೇಲೆ ಯಾಕೋ ಸುಮ್ಮನೆ ಮಲಗುವುದು ಅಸಹನೀಯ ವೆನಿಸಿದ್ದರಿಂದ ಎದ್ದು ಬಿಟ್ಟೆ. ಬೇಗ ರೆಡಿಯಾದೆ. ಆಮೇಲೇನು ಮಾಡುವುದು? ಹನ್ನೆರೆಡು ಘಂಟೆಗೆ ವೇದಾ ಮೇಡಂ ಎಲ್ಲಿ ಸಿಗಬಹುದು..? ಅವರು ಫೋನ್ ಮಾಡಬಹುದೇನೋ ಎಂದು ಕಾಯಹತ್ತಿದೆ . ನಾನೇ ಒಂದು ಫೋನ್ ಮಾಡಲಾ  ಎಂದು ಸಾವಿರಾರು ಬಾರಿ ಎನಿಸಿತ್ತಾದರೂ ಅದೇಕೋ ಮನಸ್ಸು ಹಿಂಜರಿದಿತ್ತು.
ಸಮಯ ಕಳೆಯುವುದು ಅಸಹನೀಯವೆನಿಸಿತ್ತು. ಪುಸ್ತಕ ತೆಗೆದುಕೊಂಡರೆ ಒಂದು ಪುಟವನ್ನು ಏಕಾಗ್ರತೆಯಿಂದ ಓದಲಾಗಲಿಲ್ಲ ಟಿವಿಯಲ್ಲಿನ ಕಾರ್ಯಕ್ರಮಗಳು ನೋಡುವ ಮುಂಚೆಯೇ ಬೋರ್ ಹೊಡೆಸುತ್ತವೇನೋ ಎನಿಸಲು ಪ್ರಾರಂಭಿಸಿತ್ತು. ಗೆಳೆಯರು ಫೋನ್ ಮಾಡಿದರೂ ಪ್ರತಿಕ್ರಿಯಿಸಲಿಲ್ಲ ಅಕಸ್ಮಾತ್ ಅಲ್ಲಿ ಬಾ ಇಲ್ಲಿ ಬಾ ಎಂದೆಲ್ಲಾ ಕರೆದರೆ ಏನು ಮಾಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದರೂ ಅಂತರಾಳದಲ್ಲಿ ಅವರ್ಯಾರ ಜೊತೆ ಮಾತನಾಡಲು ಇಷ್ಟವಿರಲಿಲ್ಲ.
ಗಡಿಯಾರದ ಕಡೆಗೆ, ಆನಂತರ ಕೈ ಗಡಿಯಾರದ ಕಡೆಗೆ, ಆನಂತರ ಮೊಬೈಲಿನಲ್ಲಿ ತೋರಿಸುವ ಸಮಯದ ಕಡೆಗೆ ಬೇಡಬೇಡ ವೆಂದರೂ ಕಣ್ಣು ಹಾಯುತ್ತಿತ್ತು.
ಹನ್ನೆರೆಡಾಯಿತು . ಇನ್ನೇನು ಫೋನ್ ಬರಬಹುದು ಎನಿಸಿತು. ಫೋನ್ ಕೈಯಲ್ಲಿ ಹಿಡಿದುಕೊಂಡು ಕಾಯತೊಡಗಿದೆ.. ಎದೆಬಡಿತ ಜೋರಾಗಿತ್ತು. ಚಡಪಡಿಕೆ ಜಾಸ್ತಿಯಾಗುತಿತ್ತು .
ಹನ್ನೆರೆಡು  ಹತ್ತಾಯಿತು.
ಫೋನ್ ಬರಲಿಲ್ಲ .
ಅಕಸ್ಮಾತ್ ನೆಟ್ವರ್ಕ್ ಪ್ರಾಬ್ಲಂ ಇರಬಹುದಾ? ಕೆಲವೊಮ್ಮೆ ಆ ಕಡೆಯಿಂದ ಫೋನ್ ಮಾಡಿದರು. ಈ ನೆಟ್ ವರ್ಕ್ ಕೈ ಕೊಟ್ಟು ನನ್ನದು ನಾಟ್ ರೀಚಬಲ್ ಆಗಿಬಿಟ್ಟರೆ ...ಹೀಗೆ ಒಮ್ಮೆಲೇ  ಹಲವಾರು ಪ್ರಶ್ನೆಗಳು ಕಾಡಲು ಪ್ರಾರಂಭಿಸಿತ್ತು.
ಮತ್ತೆ ಮೊಬೈಲ್ ಕಡೆ ನೋಡುವುದು ...ಗಡಿಯಾರದ ಕಡೆಗೆ..ಹೀಗೆ..?
ಹನ್ನೆರೆಡುವರೆಯಾಯಿತು..
ಒಂದಾಯಿತು..
ವೇದಾ ಫೋನ್ ಮಾಡಲಿಲ್ಲ .
ಯಾಕೋ ಬೇಸರವಾಯಿತು. ವೇದಾ ಮೇಡಂ ಮರೆತುಬಿಟ್ಟರಾ ಹೇಗೆ? ಹಾಗೆಲ್ಲಾ ಆಕೆ ಮರೆಯುವವರಲ್ಲ ಎನಿಸಿತು. ಕೊನೆಗೆ ತಡೆಯಲಾರದೆ ನಾನೇ ಫೋನ್ ಮಾಡಿದೆ.
ಕಿವಿಯ ಹತ್ತಿರ ಮೊಬೈಲ್ ಹಿಡಿದುಕೊಂಡೆ. ಎದೆ ಬಡಿತ ಜೋರಾಗಿತ್ತು.
ಮಬೈಲ್ ಸ್ವಿಚೆಡ್  ಆಫ್ ಆಗಿತ್ತು.
ನನ್ನನ್ಯಾರೋ ಎತ್ತಿ ದೊಡ್ಡ ಕಂದಕಕ್ಕೆ ಬೀಸಾಕಿದ ಅನುಭವವಾಗಿತ್ತು. ಬೇಸರ ಮನಸಿನ ಮೂಲೆಮೂಲೆಯಲ್ಲೂ ತುಂಬಿಕೊಂಡಿತು . ಯಾಕೋ ನನಗರಿವಿಲ್ಲದೆ  ಕಣ್ಣಂಚಲ್ಲಿ ನೀರು ಬಂದಿತು.
 ಮತ್ತೆ ಮತ್ತೆ ಪ್ರಯತ್ನಿಸಿದೆ .
ಮತ್ತದೇ ಹೆಂಗಸು ಸ್ವಿಚೆಡ್  ಆಫ್ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದ್ದಳು.
ಸೀದಾ ಹಾಸಿಗೆಯ ಮೇಲೆ ಹಾಗೆಯೇ ಬಿದ್ದುಕೊಂಡೆ ನನ್ನ ಮೂಡ್  ಹಾರಿ ಹೋಗಿತ್ತು.
ಪ್ಯಾಂಟು ಶರ್ಟು ಯಾವುದನ್ನು ತೆಗೆಯಬೇಕೆನಿಸಲಿಲ್ಲ .
ಊಟವನ್ನೂ ಮಾಡಲಿಲ್ಲ.
ಮತ್ತೆ ಮೊಬೈಲ್ ಟ್ರೈ ಮಾಡಿದೆ. ಮತ್ತದೇ...
ಹಾಗೆ ಇಡೀ ದಿನ ರಾತ್ರಿಯವರೆಗೂ ಟ್ರೈ ಮಾಡುತ್ತಲೇ ಇದ್ದೆ .
ಮತ್ತು ಅದೇ ಹೆಂಗಸು ಅದನ್ನೇ ಹೇಳಿ ಹೇಳಿ ಸುಸ್ತು ಹೊಡೆದುಹೋಗಿದ್ದಳು.
ನನ್ನ ಇಡೀ ಭಾನುವಾರ , ನನ್ನ  ಮನಸ್ಸು ಎಲ್ಲಾ ಹಾಳಾಗಿಹೋಗಿತ್ತು . ಇದ್ದಕಿದ್ದಂತೆ ನನ್ನ ಮೇಲೆ, ವೇದಾ ಮೇಲೆ ಅಸಾಧ್ಯ ಸಿಟ್ಟು ಬಂದಿತು.
ಒಂದು ವಾರ ರಜಾ ಹಾಕಿ ಎಲ್ಲಾದರೂ ಹೋಗಿಬಿಡಲಾ.ಕೆಲಸ ಬಿಟ್ಟುಬಿಡಲಾ. ಹೀಗೆ ಏನೇನೋ  ಹುಚ್ಚುಚ್ಚು ಯೋಚನೆಗಳು ಮನಸ್ಸಿನಲ್ಲಿ  ಹಾದುಹೋದವು.
ಆದರೆ ಅದ್ಯಾರೋ ಹೆಂಗಸಿಗೆ ನಾನ್ಯಾಕೆ ಹಾಗೆ ಮಾಡಬೇಕು..? ಎನಿಸಿತು ಕೂಡ .
ಕೊನೆಗೆ ಮನಸನ್ನು ಒಂದು ತಹಬದಿಗೆ ತರಲು ಸಾಕುಸಾಕಾಯಿತು.
ಬೆಳಿಗ್ಗೆ ಆಫೀಸಿನಲ್ಲಿ ನೇರವಾಗಿ ಕೇಳಬೇಕು..
ಅಥವಾ ಆಕೆ ಭೇಟಿ ಮಾಡದೆ ಇದ್ದುದರಿಂದ ನನಗೇನೂ ಆಗಿಲ್ಲವೆಂಬಂತೆ ಸುಮ್ಮನಿದ್ದುಬಿಡುವುದಾ?
ಮನಸ್ಸು ಗೊಂದಲದಲ್ಲೇ ಇತ್ತು.
ಆದರೂ ಒಂದು ಪ್ರಶ್ನೆ  ಕಾಡುತ್ತಲೇ ಇತ್ತು,
'ವೇದಾ ಮೇಡಂ ಹಾಗೇಕೆ ಮಾಡಿದರು....?'                                              [ಸಶೇಷ]
ನನ್ನ ಪುಸ್ತಕ ಇಲ್ಲಿ ದೊರೆಯುತ್ತದೆ:
ಗೂಗಲ್ ಪ್ಲೇ ನಲ್ಲಿ
ಗೂಗಲ್ ಬುಕ್ ನಲ್ಲಿ. 

Tuesday, November 13, 2012

ಕುಬಿ ಮತ್ತು ಹಿಟ್ ವಿಕೆಟ್ ...

 ಮೈಸೂರಿಗೆ ಹೋಗಿ ಬರುವುದಿತ್ತು. ಹಾಗಾಗಿ ಒಂದಷ್ಟು ಪುಸ್ತಕಗಳನ್ನು ಜತೆಯಲ್ಲಿಟ್ಟುಕೊಂಡಿದ್ದೆ . ಸಮಯ ಸಿಕ್ಕಾಗಲೆಲ್ಲಾ ಓದುವುದರಿಂದ ಸಮಯದ ಸದುಪಯೋಗ  ಆಗುತ್ತದೆನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಈಗಾಗಲೇ ಸುಮಾರು ಸಮಯವನ್ನು ಹೇಗೇಗೋ ಕಳೆದುಹಾಗಿದೆ. ನನ್ನ  ನೆಚ್ಚಿನ ನಿರ್ದೇಶಕ/ನಟ ಶಂಕರ್ ನಾಗ್ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಪ್ರತಿಕ್ಷಣವನ್ನು ದುಪ್ಪಟ್ಟು ದುಡಿಸಿಕೊಂಡವರು ಶಂಕರ್. 
ಹಾಗಾಗಿ ಈ ಸಾರಿ ಜೋಗಿಯವರ ಕಾದಂಬರಿ 'ಹಿಟ್ ವಿಕೆಟ್',  ಕಥಾ ಸಂಕಲನ ಸಂಕಲನ ಕಾಡು ಹಾದಿಯ ಕಥೆಗಳು ನನ್ನ ಪುಸ್ತಕದ ಸಂಗ್ರಹದಲ್ಲಿದ್ದವು. . ಹಿಟ್ ವಿಕೆಟ್ ಓದಿದೆ . ಕಾದಂಬರಿ ಸತ್ವವೇನೋ ಇಷ್ಟವಾಯಿತು. ಆದರೆ ನಿರೂಪಣೆ ಯಾಕೋ ಹಿಡಿಸಲಿಲ್ಲ . ಪ್ರತಿ ಅಧ್ಯಾಯದ ಕೊನೆಗೆ ಮುಂದಾಗುವುದರ ಸುಳಿವು ಪ್ರತಿ ಸಾರಿ ಕೊಡುವುದು ಯಾಕೋ ಕಿರಿಕಿರಿ ಎನಿಸಿತು. ಮೊದಲೆಲ್ಲಾ ಯಂಡಮೂರಿ ವೀರೇಂದ್ರನಾಥರ  ಧಾರಾವಾಹಿಗಳು ನಿಯತಕಾಲಿಕದಲ್ಲಿ ಬರುವಾಗ ಆ ತರಹದ ಸುಳಿವುಗಳನ್ನು ಮುಂದಿನವಾರಕ್ಕೆ ಕಾಯುವಂತೆ ಮಾಡುತ್ತಿದ್ದವು. ಯಾವುದೋ ಒಂದು ಘಟನೆಯ ಕೊನೆಯಲ್ಲಿ 'ಅದೇ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆನ್ನುವುದು ಆ ಕ್ಷಣದಲ್ಲಿ ಅವನಿಗೆ ಗೊತ್ತಿರಲಿಲ್ಲ', 'ಆಕೆಯ ನಿರ್ಧಾರ ಅಚಲವಾಗಿತ್ತು. ಅದೇ ಮುಂದೆ ಅವಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ ಎಂಬುದು ಆ ಕ್ಷಣಕ್ಕೆ ಆಕೆಯಾ ಅರಿವಿಗೆ ಬರಲಿಲ್ಲ' ಎಂಬೆಲ್ಲಾ ಸೂಚನೆ/ಸುಳಿವುಗಳು ಕುತೂಹಲವನ್ನು ಇಮ್ಮಡಿಗೊಳಿಸುತ್ತಿತ್ತು. ಆದರೆ ಅದೇ ಒಟ್ಟಾರೆಯಾಗಿ ಕಾದಂಬರಿ ರೂಪದಲ್ಲಿ ನಮ್ಮ ಕೈಗೆ ಸಿಕ್ಕಾಗ ಅಂತಹ ಮಜವನ್ನೇನೋ ಕೊಡುತ್ತಿರಲಿಲ್ಲ . ಆಗ ಕೊಡುತ್ತಿತ್ತೇನೋ ..ಆದರೆ ಇತ್ತೀಚಿಗೆ ಯಾಕೋ ಆ ತರಹದ ಸುಳಿವು ಕಿರಿಕಿರಿ ಉಂಟುಮಾಡುತ್ತವೆ . ಕಾರಣ ನನಗೂ ಗೊತ್ತಿಲ್ಲ . ಮೊನೆ ಹಿಟ್ ವಿಕೆಟ್ ಕಾದಂಬರಿ ಓದುವಾಗಲೋ ನನಗೆ ಹಾಗೆ ಆಯಿತು . ಕ್ರಿಕೆಟ್ , ಬೆಟ್ಟಿಂಗ್ ಅದರ ವಿರಾಟ ರೂಪ ಮುಂತಾದವುಗಳನ್ನು ಒಂದು ಕಾದಂಬರಿಯಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯ . ಮತ್ತದಕ್ಕೆ ಸಾಕಷ್ಟು ದಾಖಲೆ , ನಿಜ ಘಟನೆಗಳನ್ನೂ ಸೇರಿಸಿದಾಗ ಇನ್ನೂ ಕಾದಂಬರಿ ಸತ್ವಯುತವಾಗುತ್ತದೆ . ಆದರೆ ಹಿಟ್ ವಿಕೆಟ್ ತೀರಾ ಸಾದಾರಣ ಎನಿಸಿತು. ಬಹುಶ ನನಗೆ ಜೋಗಿ ಮೆಚ್ಚಿನ ಲೇಖಕರಾದ್ದರಿಂದ ನಾನೇ ಅತಿಯಾಗಿ ನಿರೀಕ್ಷೆ ಮಾಡಿದುದರಿಂದ ಹೀಗಾಯಿತೇನೋ?
ಅವರ ಕಥಾಸಂಕಲನ ಕಾಡು ಹಾದಿಯ ಕಥೆಗಳು ಹಿಡಿಸಿತು. ಆ ಕಥೆಗಳನ್ನು ಅಲ್ಲಲ್ಲಿ ಓದಿದ್ದರೂ ಒಂದೇ ಪುಸ್ತಕದಲ್ಲಿ ಒಂದೇ ಗುಕ್ಕಿಗೆ ಸಿಕ್ಕಿದ್ದು ಖುಷಿಯಾಯಿತು. ಕಥೆಗಳೂ ಅಷ್ಟೇ ಬೇರೆ ಯಾವುದೋ ಲೋಕಕ್ಕೆ ಕರೆದುಕೊಂಡು ಹೋದವು. 
ಮನೆಯಲ್ಲಿ ನಮ್ಮ ಪುಸ್ತಕದ ನಿಮಿತ್ತ ಕುಬಿ ಮತ್ತು ಇಯಾಲ ಸಿನೇಮ ನೋಡಿದೆ . ತೇಜಸ್ವಿಯವರ  ಕಥೆಯನ್ನು ಮೊದಲೇ ಓದಿದ್ದೆ.  ಹಾಗೆ ಸಿನೆಮಾವನ್ನೂ ಮೊದಲೇ  ನೋಡಿದ್ದೆನಾದರೂ ಹೆಚ್ಚು ಕಡಿಮೆ ಸಿನೆಮಾ ವಿವರಗಳು ಮರೆತೇ  ಹೋಗಿತ್ತು. ಹಾಗಾಗಿ ಮತ್ತೆ ನೋಡಿದೆ. ನಿರ್ದೇಶಕರು ಸದಾನಂದ ಸುವರ್ಣ. ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಚಿತ್ರದ ನಿರ್ಮಾಪಕರು. ಕುಬಿ ಮತ್ತು ಇಯಾಲ ಚಿತ್ರಕ್ಕೆ ರಾಷ್ಟ್ರ , ರಾಜ್ಯ ಪ್ರಶಸ್ತಿಗಳು ದೊರೆತಿವೆ . ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬರೆದಿದ್ದಾರೆ . ಇನ್ನು ಸಿನೆಮಾದ ಬಗ್ಗೆ ಎಲ್ಲರಿಗೂ ಗೊತ್ತಿರುವಂತಹದ್ದೆ .   ಹಳ್ಳಿಗೆ ಹೊಸದಾಗಿ ಬರುವ ವೈದ್ಯ ಕುಬಿಗೆ ಆ ಊರಿನ ಕ್ರೈಸ್ತ ಧರ್ಮದ ಹುಡುಗಿ ಇಯಾಲಳ  ಪರಿಚಯವಾಗುತ್ತದೆ . ಆಕೆಯ ಮುಗ್ಧತೆ, ತುಂತುತನಗಳು ಕುಬಿಯವರಿಗೆ ಆಕೆಯನ್ನು ಆಪ್ತಳನ್ನಾಗಿಸುತ್ತದೆ .ಆನಂತರ ಆಕೆಯ ಕೊಲೆಯಾಗುತ್ತದೆ . ಅದನ್ನು  ಜನರು ಹೇಗೆ ತಮ್ಮ ತಮ್ಮ ಸ್ವಾರ್ಥಕೆ ಬಳಸಿಕೊಳ್ಳುತ್ತಾರೆಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ನಿರೂಪಿಸುತ್ತ ಹೋಗುತ್ತಾರೆ. ಕುಬಿಯಾಗಿ ಚಾರು ಹಾಸನ್ ಉತ್ತಮ ಅಭಿನಯ ನೀಡಿದ್ದಾರೆ.

Monday, November 12, 2012

ಆತ ಹಂತಕ ಜೋ...

ಅದೊಂದು ಅಸ್ತವ್ಯಸ್ತ ಕುಟುಂಬ ಎಂದೇ ಹೇಳಬಹುದು. ಅಪ್ಪ, ಮಲತಾಯಿ, ಅಣ್ಣ ತಂಗಿ ಅದರ ಸದಸ್ಯರು. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳಿವೆ. ಎಲ್ಲರಿಗೂ ಹಣದ ಅವಶ್ಯಕತೆ ಇದೆ . ಮಗ ಹುಟ್ಟಾ ಕುಡುಕ . ಜೂಜು ಕೋರ. ಊರಲ್ಲಿರುವ ದುಶ್ಚಟಗಳೆಲ್ಲಾ ಅವನಿಗೊಬ್ಬನಿಗೆ ಇದೆ .ಮೈತುಂಬಾ ಸಾಲ  ಮಾಡಿಕೊಂಡಿದ್ದಾನೆ. ಅವನನ್ನು ಸಾಲಗಾರರು ಬೆನ್ನೆತ್ತಿದ್ದಾರೆ . ನಿಗದಿತ ಸಮಯದಲ್ಲಿ ಅವರ ಹಣ ಕೊಡದಿದ್ದರೆ ಅವರು ಸಾಯಿಸಿಬಿಡುತ್ತಾರೆ. ಅಂತಹ ಕಟುಕರು ಅವರು . ಆಗ ಅವನಿಗೆ ಗೆಳೆಯ ಒಂದು ಐಡಿಯಾ ಕೊಡುತ್ತಾನೆ. ಈಗ ಇಡೀ ಕುಟುಂಬದಿಂದ ದೂರ ಉಳಿದಿರುವ ತಾಯಿಯ ಹೆಸರಲ್ಲಿ ಇನ್ಸ್ಯೂರನ್ಸ್ ಇದೆ. ಆಕೆ ಸತ್ತರೆ ಅದು ತಂಗಿಯ ಪಾಲಾಗುತ್ತದೆ . ಎಲ್ಲರೂ ಹಂಚಿಕೊಂಡರೆ ಕಷ್ಟಗಳು ಮಾಯವಾಗುತ್ತವೆ. ಆ ಐಡಿಯಾ ಮಗನಿಗೆ ಸರಿ ಎನಿಸುತ್ತದೆ . ಮೊದಲು ತಂದೆಯೊಂದಿಗೆ, ಆಮೇಲೆ ಇಡೀ ಕುಟುಂಬದ ಜೊತೆ ಚರ್ಚಿಸಿದಾಗ ಅಲ್ಲೂ ಗ್ರೀನ್ ಸಿಗ್ನಲ್ ದೊರೆಯುತ್ತದೆ.  ಆಕೆ ನಿಜಕ್ಕೂ ಯಾರಿಗೂ ಬೇಕಾಗಿರುವುದಿಲ್ಲ . ಆಕೆಗೀಗ ವಾರಸುದರರೂ ಇರುವುದಿಲ್ಲವಾದ್ದರಿಂದ ಅದರ ಲಾಭ ಪಡೆಯಲು ಇಡೀ ಕುಟುಂಬ ನಿರ್ಧರಿಸುತ್ತದೆ. ಈಗ ಆಕೆಯನ್ನು ಕೊಲೆ ಮಾಡಬೇಕು. ಯಾರು  ಮಾಡುವುದು? ಒಂದು ಕೊಲೆಯನ್ನು ಕರಾರುವಕ್ಕಾಗಿ ಮಾಡುವವರು ಯಾರು? ಪೋಲಿಸ್ ಕಣ್ಣುಗಳಿಂದ ತಪ್ಪಿಸಿ ಇನ್ಶ್ಯೂರನ್ಸ್ ಹಣ ತಲುಪುವಂತೆ ಮಾಡುವವರು ಯಾರು? ಅದಕ್ಕಾಗಿ  ಸರಿಯಾದ ವ್ಯಕ್ತಿಯೆಂದರೆ ಜೋ ಕೂಪರ್ . ವೃತ್ತಿಯಲ್ಲಿ ಆತ  ದಿಟೆಕ್ಟಿವ್. ಆದರೂ ಕೆಲವೊಮ್ಮೆ ಹಣಕ್ಕೋಸ್ಕರ ಈ ತರಹದ ಕೆಲಸ ಮಾಡುತ್ತಾನೆ . ಆದರೆ ಆತನ ಕೆಲಸ ಪಕ್ಕಾ. ಹಾಗೆ ದುಡ್ಡಿನ ವಿಷಯದಲ್ಲೂ ಆತ  ಅಷ್ಟೇ ಕಟ್ಟುನಿಟ್ಟು.ಅಪ್ಪ ಮಗ ಇಬ್ಬರೂ ಆತನನ್ನು ಭೇಟಿ  ಮಾಡುತ್ತಾರೆ. ಆತ ಒಂದು ದೊಡ್ಡ ಮೊತ್ತದ ಹಣಕ್ಕಾಗಿ ಕೆಲಸ ಒಪ್ಪಿಕೊಳ್ಳುತ್ತಾನೆ. ಹಾಗೆ ಕೆಲಸ ಕೂಡ ಮುಗಿಸುತ್ತಾನೆ.      ಆನಂತರ ಗೊತ್ತಾಗುವ ವಿಷಯವೆಂದರೆ ಆಕೆ ಸತ್ತರೆ ಆ ಹಣ ಇವರಿಗೂ ದೊರೆಯುವುದಿಲ್ಲಾ ಎಂಬುದು.? ಅಂದರೆ ಆಕೆ ತನ್ನ ಹಣವನ್ನು ಮಗಳ ಹೆಸರಿಗೆ ಬರೆದಿಲ್ಲ  ಹಾಗಾದರೆ ಮತ್ಯಾರಿಗೆ ದೊರೆಯುತ್ತದೆ..? ಈಗ ಕೊಲೆಯಂತೂ ಆಗಿ ಹೋಗಿದೆ. ಜೋ ಸುಮ್ಮನೆ ಬಿಡುವವನಲ್ಲ ... ಮುಂದೇನಾಗುತ್ತದೆ..?
 ಇದು  ಆಸ್ಕರ್ ಪ್ರಶಸ್ತಿ ವಿಜೇತ, ದಿ ಎಕ್ಸಾರ್ಸಿಸ್ಟ್, ಫ್ರೆಂಚ್ ಕನೆಕ್ಷನ್ ಮುಂತಾದ ಚಿತ್ರಗಳ  ನಿರ್ದೇಶಕ ವಿಲಿಯಂ ಫ್ರೈಡ್ ಕಿನ್ ನಿರ್ದೇಶನದ ಮ್ಯಾಥ್ಯೂ ಮೆಖಾನಿ ಅಭಿನಯದ ಕಿಲ್ಲರ್ ಜೋ ಚಿತ್ರದ ಕಥೆ. ಚಿತ್ರದ ಪ್ರಾರಂಭದಿಂದಲೇ ಹಿಡಿದು ಕೂರಿಸಿಬಿಡುವ ಗುಣವಿರುವ ಕಿಲ್ಲರ್ ಜೋ ಒಂದು ಪಕ್ಕಾತಿಪಕ್ಕ ಥ್ರಿಲರ್ ಎಂದೇ ಹೇಳಬಹುದು. ಇನ್ ಟು ದಿ ವೈಲ್ಡ್ ,ಮಿಲ್ಕ್ ಚಿತ್ರದಲ್ಲಿ ಗಮನಸೆಳೆದಿದ್ದ ಎಮಿಲಿ ಹಿರ್ಶ್ ನ ಅತ್ಯುತಮ ಅಭಿನಯವಿರುವ ಈ ಚಿತ್ರ ಇದೆ ಹೆಸರಿನ ನಾಟಕ ಆಧರಿಸಿದ ಚಿತ್ರ.
2011 ರಲ್ಲಿ  ತೆರೆಗೆ ಬಂದ ಈ ಚಿತ್ರ ಒಂದು ಗಂಟೆ ನಲವತ್ತೈದು ನಿಮಿಷಗಳಷ್ಟು ಉದ್ದವಿದೆ.