Saturday, October 19, 2013

ಅದಲಾಲ್ ಕಾದಲ್ ಸೇವೀರ್...



ಅದೊಂದು ಕಾಲೇಜು. ಅಲ್ಲೊಂದಷ್ಟು ಹುಡುಗಿ, ಹುಡುಗರು. ಆ ವಯಸ್ಸಿನಲ್ಲಿ ಇರಬಹುದಾದ ಕುತೂಹಲ ಚೆಲ್ಲಾಟ ಮೊಂಡಾಟ ಎಲ್ಲವೂ ಇದೆ. ಅಂತ ಹುಡುಗರ ಪೈಕಿ ಕಾರ್ತಿಕ್ ಇದ್ದಾನೆ. ಅದೇ ಗೆಳೆಯರ ಗುಂಪಲ್ಲಿ ಶ್ವೇತಾ ಇದ್ದಾಳೆ. ಅವರಿಬ್ಬರೂ ಪ್ರೀತಿಸುತ್ತಾರೆ. ಒಂದಷ್ಟು ಕದ್ದು ಮುಚ್ಚಿ ಓಡಾಡುತ್ತಾರೆ. ಆನಂತರ ಅದೊಂದು ದಿನ ತಮ್ಮ ವಯಸಿನ ಬಿಸಿಯಲ್ಲಿ ನಡೆಯಬಾರದ್ದು ನಡೆದುಹೋಗುತ್ತದೆ. ಮುಂದೆ..ಸುಮಾರು ವರ್ಷಗಳ ಹಿಂದೆ ತೇಜಾ ನಿರ್ದೇಶನದ ಚಿತ್ರಂ ಕಥೆಯಿದ್ದ ಹಾಗಿದೆ ಎಂದರೆ ಅದಕ್ಕೂ ಅರ್ಧ ಡಜನ್ ಇದೆ ರೀತಿಯ ಕಥೆಯಿರುವ ಸಿನಿಮಾಗಳನ್ನು ಹೇಳಿಬಿಡಬಹುದು. ಆದರೆ ನಿರ್ದೇಶಕ ಸುಸೀಂದ್ರನ್  ನಿರ್ದೇಶನದ ಅದಲಾಲ್ ಕಾದ ಸೇಯ್ವೀರ್ ಚಿತ್ರದ ಅದರ ಅತ್ಯುತ್ತಮ ಅಂತ್ಯದಿಂದಾಗಿ ನೋಡಿದ ಸುಮಾರು ಹೊತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಇಷ್ಟು ಚಿಕ್ಕ ಕಥೆಯನ್ನು ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದೋ, ಕಥೆಯೇನೋ ಚೆನ್ನಾಗಿದೆ, ಆದರೆ ಇದು ಸಿನಿಮಾಕ್ಕೆ ಸರಿಬರುವುದಿಲ್ಲ ಎಂಬಂತಹ ಮಾತುಗಳನ್ನು ನೀವು ನಮ್ಮಲ್ಲಿ ಕೇಳಬಹುದು.ಆದರೆ ಅಂತಹ ಕಥೆಗಳನ್ನು ಸಿನಿಮಾ ರೂಪಕ್ಕೆ ತಂದು ಸೈ ಎನಿಸಿಕೊಳ್ಳುವುದರಲ್ಲಿ ತಮಿಳರದು ಎತ್ತಿದ ಕೈ. ಅವರು ಒಂದು ಕಥೆ ಇಟ್ಟುಕೊಂಡರೆ ಅದಕ್ಕೆ ತಕ್ಕಂತೆ ಚಿತ್ರಕಥೆ ಹೆಣೆಯುತ್ತಾ ಸಾಗುತ್ತಾರೆಯೇ ಹೊರತು ಅದರಲ್ಲಿ ಬಲವಂತವಾಗಿ ಮನರಂಜನಾ ಅಂಶಗಳನ್ನು ತುರುಕುವುದಕ್ಕೆ ಹೋಗುವುದಿಲ್ಲ. ಹಾಗಂತ ತೀರಾ ಪ್ರಯೋಗವನ್ನೂ ಮಾಡುವುದಿಲ್ಲ. ಕಥೆಯ ನೆಲೆಗಟ್ಟಿನಲ್ಲಿ ನಡೆಯಬಹುದಾದ ವಾಸ್ತವಿಕ ಅಂಶಗಳನ್ನು ಜೋಡಿಸುತ್ತಾ ಸಾಗುತ್ತಾರೆ. ನಾನು ಗಮನಸಿದ ಹಾಗೆ ನಮ್ಮಲ್ಲಿ ಅದು ಸ್ವಲ್ಪ ಕಡಿಮೆ. ಉದಾಹರಣೆಗೆ ಈ ಚಿತ್ರವನ್ನೇ ತೆಗೆದುಕೊಳ್ಳಿ. ಇದು ಕೇವಲ ಒಂದು ಘಂಟೆ ಮೂವತ್ತು ನಿಮಿಷಗಳ ಚಿತ್ರ. ಒಂದು ಸಿನಿಮಾ ಅದೂ ಹಾಡುಗಳಿರುವ ಪ್ರೇಮ ಕಥೆ ಕೇವಲ ಒಂದೂವರೆ ಘಂಟೆ ಎಂಬುದನ್ನು ಊಹಿಸುವುದು ನಮ್ಮಲ್ಲಿ ಕಷ್ಟ. ಹೇಳಿಕೊಳ್ಳುವಂತಹ ನಾಯಕ –ನಾಯಕಿ ಇಲ್ಲ. ಆದರೆ ಕಥೆ ಮತ್ತು ಚಿತ್ರಕಥೆ ನಿಮ್ಮನ್ನು ಕುರ್ಚಿಗೆ ಅಂಟಿಸಿ ಕೂರಿಸಿಬಿಡುತ್ತದೆ. ಕೊನೆಯ ದೃಶ್ಯವಂತೂ ನಿಮ್ಮ ಕಣ್ಣಲ್ಲಿ ಒಂದು ಹನಿ ನೀರು ತರಿಸಿಬಿಡುತ್ತದೆ. ಹಾಗಂತ ಇದು ದುರಂತಮಯ ಚಿತ್ರವಲ್ಲ. ನಾಯಕ –ನಾಯಕಿ ಕೊನೆಯಲ್ಲಿ ಸುಖವಾಗಿಯೇ ಇರುತ್ತಾರೆ..ಆದರೂ..ಏನು ಎಂಬ ಪ್ರಶ್ನೆಗೆ ಉತ್ತರ ಬೇಕಾದಲ್ಲಿ ನೀವೇ ಒಮ್ಮೆ ಈ ಸಿನೆಮಾ ನೋಡಿಬಿಡಿ..ಅಥವಾ ಕಾಯಿರಿ. ಯಾರಾದರೂ ಕನ್ನಡದ ಪುಣ್ಯಾತ್ಮರು ಇದನ್ನು ರೀಮೇಕ್ ಮಾಡಿದರೂ ಮಾಡಬಹುದು.ನಿರ್ದೇಶಕ ಸುಶೀಂದ್ರನ್ ಸಣ್ಣಕಥೆಯಾಧಾರಿತ ಚಿಕ್ಕ ಬಜೆಟ್ಟಿನ ಪರಿಣಾಮಕಾರಿ ಚಿತ್ರಕಥೆಯ ಚಿತ್ರಗಳಿಗೆ ಹೆಸರುವಾಸಿಯಾದವರು. ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಹೊತ್ತಿರುವ ಈ ಯುವ ನಿರ್ದೇಶಕರು ಪ್ರಯೋಗಗಳಿಗಿಂತ ಹೆಚ್ಚಾಗಿ ಉತ್ತಮ ಮನಮಿಡಿಯುವ ಕಥೆಗಳಿಗೆ ಹೆಸರುವಾಸಿಯಾದವರು. ಇವರು ನಿರ್ದೇಶನದ ವೆನಿಲ್ಲಾ ಕಬಡ್ಡಿಕುಳಂ ಕಬಡ್ಡಿ ಕ್ರೀಡೆಯ ಬಗ್ಗೆ ಬಂದಂತಹ ಅತ್ಯುತ್ತಮ ಚಿತ್ರ. ಅದಾದ ನಂತರ ಅಳಗಿರಿಸಾಮಿಯನ್ ಕುದುರೈ ಪ್ರಶಸ್ತಿ ವಿಜೇತ ಸಣ್ಣ ಕಥೆಯಾಧಾರಿತ ಚಿತ್ರ. 

Thursday, October 17, 2013

ಒಂದೆ ಕಥೆ..ಎರಡು ಸಿನೆಮಾಗಳು

 ರೋಲಂಡ್ ಎಂರಿಚ್ ನಿಮಗೆ ಗೊತ್ತಿರಬಹುದು. ದೃಶ್ಯ ವೈಭವದ ಅಂದರೆ ಗ್ರಾಫಿಕ್ಸ್ ಹೊಂದಿದ ಚಿತ್ರಗಳನ್ನು ನಿರ್ದೇಶನ ಮಾಡುವುದರಲ್ಲಿ ಮತ್ತು ವಿನಾಶಕಾರಿ, ಧ್ವಂಸಾತ್ಮಕ ಕಥೆಯ ಚಿತ್ರಗಳೆಂದರೆ ರೋಲಂಡ್ ಖುಷಿಯೇನೋ? ಆತನ ಚಿತ್ರಗಳನ್ನು ಒಮ್ಮೆ ಗಮನಿಸಿ.ಗಾಡ್ಜಿಲ್ಲಾ, 2012, ಇಂಡಿಪೆಂಡೆನ್ಸ್ ಡೇ,ದಿ ಡೇ ಆಫ್ಟರ್ ಟುಮಾರೋ,ಮೂನ್ 44, ..ಹೀಗೆ. ಹೆಚ್ಚು ಎಲ್ಲಾ ಚಿತ್ರಗಳಲ್ಲೂ ಆತನ ತಾಂತ್ರಿಕ ಕೌಶಲವನ್ನು ನಾವು ಕಾಣಬಹುದು. ಆತನ ನಿರ್ದೇಶನದಲ್ಲಿ ಈ ವರ್ಷ ಬಿಡುಗಡೆಯಾದ ಚಿತ್ರ ವೈಟ್ ಹೌಸ್ ಡೌನ್. ಇದು ಹೆಸರೇ ಸೂಚಿಸುವಂತೆ ಉಗ್ರಗಾಮಿಗಳು ವೈಟ್ ಹೌಸ್ ಅನ್ನು ಮುತ್ತಿಗೆ ಹಾಕುವುದು, ನಾಯಕ ಹೋರಾಡಿ ಅಲ್ಲಿನ ಪ್ರಧಾನಿಯನ್ನು ಉಳಿಸುವುದು ಇಷ್ಟೇ ಕಥೆ. ಆಶ್ಚರ್ಯದ ಸಂಗತಿಯೆಂದರೆ ಇದೆ ವರ್ಷ ಬಿಡುಗಡೆಯಾದ ಒಲಿಂಪಸ್ ಹ್ಯಾಸ್ ಫಾಲನ್ ಚಿತ್ರದ ಕಥೆಯೂ ಇದೆ. ವ್ಯತ್ಯಾಸವೇನೆಂದರೆ ಮಗಳನ್ನು ಸಂಸತ್ತು ಭವನಕ್ಕೆ ಕರೆದುಕೊಂಡು ಬರುವ ನಾಯಕ ಅನಿರೀಕ್ಷಿತವಾಗಿ ಉಗ್ರಗಾಮಿಗಳ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಒಲಿಂಪಸ್ ಚಿತ್ರದಲ್ಲಿ ನಾಯಕ ಅಪಘಾತದಲ್ಲಿ ಪ್ರೆಸಿಡೆಂಟ್ ಪತ್ನಿಯನ್ನು ಉಳಿಸಲು ಸಾಧ್ಯವಾಗದಿದ್ದಾಗ ಆ ಕೆಲಸಕ್ಕೆ ರಾಜಿನಾಮೆ ನೀಡಿರುತ್ತಾನೆ.ಚಿತ್ರದ ಕಥೆ, ನಿರೂಪಣೆ ಎರಡೂ ಒಂದೆ ಆಗಿವೆ. ಹಾಗೆಯೇ ಸಾಹಸಮಯ ದೃಶ್ಯಗಳು. ಆದರೆ ಆಂಟೊನಿ ಫುಕುಅ ನಿರ್ದೇಶನದ ಒಲಿಂಪಸ್ ಹ್ಯಾಸ್ ಫಾಲನ್ ಚಿತ್ರದ ವೇಗ ಚೆನ್ನಾಗಿದೆ. ಕೇವಲ ಒಂದೂವರೆ ಗಂಟೆಗಳ ಈ ಚಿತ್ರದ ಚಿತ್ರಕಥೆ ಶರವೇಗದಲ್ಲಿ ಸಾಗುತ್ತದೆ.ನಿರ್ದೇಶಕ ಅಂತೋಣಿ ಫುಕಾ ಈ ಹಿಂದೆ ಶೂಟರ್ ಚಿತ್ರವನ್ನು ನಿರ್ದೇಶನ ಮಾಡಿದವನು.ಹಾಗೆಯೇ ನಾಯಕನಾಗಿ ಅಭಿನಯಿಸಿರುವ ಗೆರಾರ್ಡ್ ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾನೆ. ಆದರೆ ಎರಡು ಘಂಟೆ ಇಪ್ಪತ್ತು ನಿಮಿಷದ ವೈಟ್ ಹೌಸ್ ಡೌನ್ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ಅದಕ್ಕೆ ಕಾರಣ ಚಿತ್ರದ ಉದ್ದ ಎನ್ನಬಹುದು.
ಆದರೆ ಆಕಾಶದಲ್ಲಿ ವಿಮಾನ ಹತ್ತಿ ಉರಿಯುವುದು, ಹೆಲಿಕ್ಯಾಪ್ಟರ್ ಬೆಂಕಿಗೆ ಸಿಕ್ಕಿ ನೆಲಕ್ಕೆ ಬೀಳುವುದು ಮುಂತಾದವುಗಳು ವೈಟ್ ಹೌಸ್ ನ ಮುಖ್ಯಾಂಶಗಳು ಎನ್ನಬಹುದು. ಅದೇ ರೀತಿ ಒಲಿಂಪಸ್ ಚಿತ್ರದಲ್ಲೂ ಕೋರಿಯನ್ ಉಗ್ರರು ದಾಳಿ ಮಾಡುವ ಶೈಲಿ ಅದನ್ನು ನಾಯಕನೋಬ್ಬನೆ ಬೇಧಿಸುತ್ತಾ ಹೋಗುವುದು ಕನ್ನಡದ ನಿಷ್ಕರ್ಷ ಚಿತ್ರವನ್ನು ನೆನಪಿಸದೇ ಇರದು.
ಒಟ್ಟಿನಲ್ಲಿ ಒಂದೆ ವರ್ಷದಲ್ಲಿ ತಿಂಗಳುಗಳ ಅಂತರದಲ್ಲಿ ಒಂದೆ ಕಥೆಯ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಒಲಿಂಪಸ್ ಕೊಡುವ ಮಜಾವನ್ನು ವೈಟ್ ಕೊಡುವುದಿಲ್ಲ. ಟೈಮ್ ಪಾಸ್ ಗೆ ಸಾಹಸಪ್ರಿಯರು ನೋಡಬಹುದಾದ ಚಿತ್ರಗಳು ಇವು ಎನ್ನಲಡ್ಡಿಯಿಲ್ಲ.

Wednesday, October 16, 2013

45 ದಿನಗಳ ರಹಸ್ಯ.

ಕಲಿತ ವಿದ್ಯೆಯನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ನಾನು ಬಾಕ್ಸಿಂಗ್ ಬಿಟ್ಟು ವರ್ಷಗಳೇ ಕಳೆದಿವೆ. ಆದರೂ ರಿಂಗ್ ಒಳಗೆ ನಿಂತಾಕ್ಷಣ ನನಗೆ ಆಟದ ಸುಲಿಹುಗಳು ನಿಚ್ಚಳವಾಗುತ್ತಾ ಹೋದವು. ಕೇವಲ ನಿಮಿಷಗಳಲ್ಲಿ ನಾನು ಅದೆಷ್ಟು ಸಿದ್ಧನಾಗಿದ್ದೆನೆಂದರೆ ಆ ತಕ್ಷಣಕ್ಕೆ ಹೊಡೆದಾಡಲು ಸಿದ್ಧನಿದ್ದೆ.
ಆದರೆ ಹೊಡೆದಾಟವಿದ್ದದ್ದು ಮಾರನೆಯ ದಿನ. ನನಗೆ ಮತ್ತೆ ಇದೆ ಹೋರಾಟಕ್ಕಿಳಿಯಲು ಸುತಾರಾಂ ಇಷ್ಟವಿರಲಿಲ್ಲ.ಯಾಕೆಂದರೆ ಆಟದಲ್ಲಿ ಮೋಸವಿತ್ತು. ಅದೊಂದು ಮನರಂಜನೆಯಿಂದ ದಂಧೆಯ ರೂಪ ತಾಳಿತ್ತು. ಯಾರು ಸೋಲಬೇಕು ಯಾರು ಗೆಲ್ಲಬೇಕು ಎಂಬುದು ಮೊದಲೇ ನಿಶ್ಚಯವಾಗಿಬಿಡುತ್ತಿತ್ತು. ನನಗೆ ಆಟವನ್ನು ಮುಂದುವರಿಸದೆ ಇರಲು ಕಾರಣವಾದದ್ದು ಇದೆ. ಆದರೆ ಮಂಗಳೂರು ಬಿಟ್ಟು ಬಾಂಬೆಗೆ ಬಂದದ್ದು ನಾನು ಹಣ ಮಾಡುವುದಕ್ಕೆ. ಆದರೆ ಬರುತ್ತಲೇ ಇಲ್ಲಿ ಸಿಕ್ಕಿ ಕೊಂಡಿದ್ದೆ. ಪತ್ತರ್ ಕೈಗೆ. ಹೋಟೆಲ್ಲಿನಲ್ಲಿ ನಡೆದ ಚಿಕ್ಕ ಹೊಡೆದಾಟದಲ್ಲಿ ಪತ್ತರ್ ಕಡೆಯವನಿಗೆ ಮಣ್ಣು ಮುಕ್ಕಿಸಿದ್ದೆ. ಆದರೆ ಆತ ನಾಳೆ ನಡೆಯಬೇಕಾಗಿದ್ದ ಬಾಕ್ಸಿಂಗ್ ನಲ್ಲಿ ಪತ್ತರ್ ಗೆ ವಿರುದ್ಧವಾಗಿ ಪತ್ತರ್ ಕಡೆಯ ಶಿವನ ಜೊತೆಗೆ ಹೊಡೆದಾಡಬೇಕಾಗಿತ್ತು. ಆದರೆ ನಾನವನಿಗೆ ಅದೇಗೆ ಭಾರಿಸಿದ್ದೆ ಎಂದರೆ ಆತ ಹುಷಾರಾಗಿ ಓಡಾಡಲು ಕನಿಷ್ಟ ಒಂದು ತಿಂಗಳಾದರೂ ಬೇಕಿತ್ತು. ನನ್ನನ್ನು ವಿಚಾರಿಸಿಕೊಳ್ಳಲು ಬಂದ ಪತ್ತರ್ ಗೆ ನಾನು ಹಳೆಯ ಬಾಕ್ಸಿಂಗ್ ಪಟು ಎಂಬುದು ಗೊತ್ತಾದದ್ದೇ ನಾಳಿನ ಆಟದಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದ. ಹೇಳಿದ್ದ ಅಲ್ಲ ಆದೇಶಿಸಿದ್ದ. ಅವನಾಡಿದ ಮಾತುಗಳು ಹೀಗಿತ್ತು. ' ನೋಡು ಮರಿ,...ನಾಳೆ ನೀನು ಅವನ ಜೊತೆ ಆಡಬೇಕು. ಎರಡು ರೌಂಡ್ ಗೆಲ್ಲಬೇಕು..ಮೂರನೆಯ ರೌಂಡ್ ಸೋಲಬೇಕು. ಅಷ್ಟೇ..ಇದು ನಡೀಬೇಕು. ನೀನು ಆಗಲ್ಲ, ಸೋಲಲ್ಲ ಅನ್ನೋ ಹಾಗೆ ಇಲ್ಲ...ಆಮೇಲೆ ಪೋಲಿಸ್ ಅಂತೆಲ್ಲಾ ಹೋಗೋ ಹಾಗೂ ಇಲ್ಲ. ಈಗಾಗಲೇ ನಾನು ಲಕ್ಷಾಂತರ ಹಣಾನ ಅದರಲ್ಲಿ ಕಟ್ಟಿದ್ದೀನಿ. ನಾನು ಹೇಳಿದ್ದು ನಡೀದೆ ಹೋದರೆ ನನಗೆ ದೊಡ್ಡ ನಷ್ಟ ಆಗುತ್ತೆ..ನಿನ್ನ ಪ್ರಾಣ ಹೋಗುತ್ತೆ...' ಎಂದಿದ್ದ ಮತ್ತು ನನ್ನ ಪ್ರತಿಕ್ರಿಯೆಗೂ ಕಾಯದೆ ಹೊರಟುಹೋಗಿದ್ದ.
ನಾನು ತಪ್ಪಿಸಿಕೊಳ್ಳುವ ಯಾವ ಅವಕಾಶವೂ ಇರಲಿಲ್ಲ.
*************    ***********
ನನ್ನ ಎದುರಾಳಿ ಶಿವ ದೈತ್ಯ ದೇಹಿ. ಆಮೇಲೆ ಅವನಿಗೂ ಆಟ ಏನು ನಡೆಯುತ್ತದೆ ಎಂಬುದು ಗೊತ್ತಿತ್ತು. ಅವನು ಎರಡು ಸುತ್ತಿನಲ್ಲಿ ಸೋಲಲೇ ಬೇಕಿತ್ತು. ಮೂರದರಲ್ಲಿ ಗೆಲ್ಲಬೇಕಿತ್ತು. ಅಕಸ್ಮಾತ್ ನಾನು ಸೋಲದೆ, ಗೆಲ್ಲಲು ಪ್ರಯತ್ನಿಸಿದರೆ ನನ್ನನ್ನು ಮುಗಿಸುವಂತೆ ಪತ್ತರ್ ಆದೇಶ ಹೊರಡಿಸಿದ್ದು ನನಗೂ ಗೊತ್ತಿತ್ತು.
ಬಾಕ್ಸಿಂಗ್ ನೋಡಲು ಜನ ಕಿಕ್ಕಿರಿದು ನಿಂತಿದ್ದರು. ಅವರ ಕೇಕೆ ಬೊಬ್ಬೆ ಮುಗಿಲು ಮುಟ್ಟಿತ್ತು. ಹೊಸಬನೊಬ್ಬ ಶಿವನ ಜೊತೆ ಆಡುತ್ತಿದ್ದಾನೆ ಎನ್ನುವುದು ಹಲವರಲ್ಲಿ ರೋಮಾಂಚನ ಉಂಟು ಮಾಡಿತ್ತು. ನಾನು ಮಾತ್ರ ಇನ್ನೂ ಯೋಚಿಸುತ್ತಲೇ ಇದ್ದೆ. ಆಟವಾದಲೇ ಬೇಕಾದಾಗ ನನ್ನನ್ನು ನಾನು ಮರೆತುಬಿಡುತಿದ್ದೆ. ಹಾಗೇನಾದರೂ ಆದರೆ ಈವತ್ತಿಗೆ ನನ್ನ ಕಥೆ ಮುಗಿಯುತ್ತಿತ್ತು. ನಾನು ಸುತ್ತಲೂ ನೋಡಿದೆ. ಮುಗ್ಧ ಜನರು ತಾವುದುಡಿದಿದ್ದನ್ನು ತಂದು ಆಟಕ್ಕೆ ಕಟ್ಟಿದ್ದರು. ಆದರೆ ಆ ಪತ್ತರ್ ತಾನು ದೋಚಿದ ಹಣವನ್ನು ಕಟ್ಟಿದ್ದ. ಅವನಿಗೆ ಹೆದರಿ ನಾನು ಸೋಲಬೇಕಾ? ನನ್ನೊಬ್ಬನ ಸೋಲಿನಲ್ಲಿ ಇಷ್ಟು ಜನರ ಸೋಲೂ ಇದೆಯಲ್ಲ ಎನಿಸದಿರಲಿಲ್ಲ.
ಆಟ ಶುರುವಾಯಿತು. ನಾನುಸುಮ್ಮನೆ ಪ್ರೇಕ್ಷಕರತ್ತ ನೋಡಿದೆ ಅಷ್ಟೇ. ಅಲ್ಲಿದ್ದಳು ಆ ಸುಂದರಿ. ನೇರವಾಗಿ ಸ್ವರ್ಗದಿಂದ ಧರೆಗೆ ಇಳಿದು ಬಂದಿರುವ ಸುಂದರಿ ಅಪ್ಸರೆ..ಅಷ್ಟು ಜನರಲ್ಲಿ ಅವಳ ಸೌಂದರ್ಯ ಎದ್ದು ಕಾಣುತ್ತಿತ್ತು. ಅವಳೂ ನನ್ನ ಕಡೆಗೆ ನೋಡುತ್ತಿದ್ದಳು. ನಾನೂ ಅವಳನ್ನು ದಿಟ್ಟಿಸಿದೆ. ನೀನು ಗೆಲ್ಲಲೇ ಬೇಕು ಎಂಬಂತೆ ಕೈ ಆಡಿಸಿದಳು. ಅಲ್ಲಿಗೆ ನಾನು ಎಲ್ಲೋ ಕಳೆದುಹೋಗಿದ್ದೆ. ಪತ್ತರ್ ಮರೆತು ಹೋಗಿದ್ದ.
ಆಟ ಶುರುವಾಯಿತು. ಮೂರು ಸುತ್ತಿನಲ್ಲಿ ಶಿವನನ್ನು ಹೊಡೆದು ಬೀಸಾಕಿದೆ. ಆತನ ಮೂಗಿನ ನಟ್ಟಿ ಹರಿದು ರಕ್ತ ಚಿಮ್ಮಿತ್ತು. ಕಣ್ಣ ಸುತ್ತ ಕಪ್ಪಾಗಿತ್ತು. ಮೂರನೆಯ ಸುತ್ತಿನ ಕೊನೆಯ ಪಂಚ್ ಗೆ ಅವನು ಬಿದ್ದದ್ದು ಹೇಗಿತ್ತೆಂದರೆ ಯಾವುದೋ ಆನೆ ಕುಸಿದುಬಿದ್ದ ಹಾಗಿತ್ತು. ಸುತ್ತಲೂ ನೋಡಿದೆ.ರೆಫಾರಿ ಬಂದು ನನ್ನ ಕೈ ಎತ್ತಿ ಗೆಲುವಿನ ಘೋಷಣೆ ಮಾಡುತ್ತಿದ್ದ. ನನ್ನ ಕಣ್ಣು ಅವಳನ್ನು ಹುಡುಕುತ್ತಿತ್ತು. ಆದರೆ ಪತ್ತರ್ ತನ್ನ ಕಡೆಯವರ ಜೊತೆ ಕೆಂಡಾಮಂಡಲವಾಗಿ ನಿಂತಿದ್ದ. ಜನರೆಲ್ಲರೂ ಅಲ್ಲಿಂದ ಹೋಗುವುದನ್ನೇ ಕಾಯುತ್ತಿದ್ದ.ಅಲ್ಲಿಂದ ಅವನ ಕೈಯಿಂದ ತಪ್ಪಿಸಿಕೊಳ್ಳಲು ನನಗೆ ಅಷ್ಟು ಮಾತ್ರದ ಸಮಯವಿತ್ತು.ಆದರೆ ನನ್ನ ಮುಂದೆ ಇದ್ದದ್ದು ಇನ್ನೂ ಒಂದು ಪ್ರಶ್ನೆ ? ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ? ಯಾಕೆಂದರೆ ಈಗಾಗಲೇ ನನ್ನ ಜಾಗದಿಂದ ಕಿಲೋಮೀಟರುಗಳವರೆಗೆ ಪತ್ತರ್ ತನ್ನ ಕಾವಲನ್ನು, ನನ್ನನ್ನು ಬೇಟೆಯಾಡಲು ಜನರನ್ನು ಬಿಟ್ಟಿರುವ ಸಾಧ್ಯತೆ ಇತ್ತು.
ನಾನು ಇನ್ನೂ ಡ್ರೆಸ್ಸಿಂಗ್ ರೂಮಲ್ಲಿದ್ದೆ. ತುಂಬ ಜನ ಅಭಿಮಾನಿಗಳು ಬಂದು ಕೈಕುಲುಕಿ ಪ್ರಶಂಸಿಸಿ ಹೋಗುತ್ತಿದ್ದರು. ವರ್ಷಗಳೇ ಕಳೆದ ಮೇಲೆ ಪ್ರಪ್ರಥಮ ಬಾರಿಗೆ ಪತ್ತರ್ ಕಡೆಯವನೊಬ್ಬ ಸೋತಿದ್ದ. ಮಣ್ಣು ಮುಕ್ಕಿದ್ದ. ಅದೇ ನನ್ನನ್ನು ಹೀರೋನನ್ನಾಗಿ ಮಾಡಿತ್ತು. ಅವರು ತಾವು ಕಟ್ಟಿದ್ದ ಚೂರುಪಾರು ಹಣ ಗೆದ್ದಿದ್ದಕ್ಕೆ ಸಂತೋಷ ಪಡುತ್ತಿರಲಿಲ್ಲ. ಯಾರೋ ಒಬ್ಬ ಪತ್ತರ್ ವಿರುದ್ಧ ಗಂಡಸುತನ ತೋರಿದನಲ್ಲ ಎಂಬುದು ಅವರ ಸಂಭ್ರಮಕ್ಕೆ ಕಾರಣವಾಗಿತ್ತು.ಆದರೆ ನಾನು ಜನರೆಲ್ಲಾ ಹೋಗುವುದನ್ನೇ ಕಾಯುತ್ತಿದ್ದೆ. ಆದರೆ ಅವರಿರುವವರೆಗೂ ಪತ್ತರ್ ಆಗಲಿ, ಅವನ ಕಡೆಯವರಾಗಲಿ ನನ್ನನ್ನು ಮುಟ್ಟುವುದಿಲ್ಲ್ಲ ಎಂಬುದೂ ನನಗೆ ಗೊತ್ತಿತ್ತು.. ಜನರೆಲ್ಲಾ, ಮಾಧ್ಯಮದವರೆಲ್ಲಾ ಒಬ್ಬೊಬ್ಬರೇ ಖಾಲಿಯಾದರು. ನಾನೂ ಹಾಗೆ ಬಾಗಿಲ ಕಡೆಗೆ ಗಮನಿಸುತ್ತಿದ್ದೆ. ಅಷ್ಟರಲ್ಲಿ ಬಂದಳು ಅಪ್ಸರೆ...ನನ್ನ ಕೋಣೆಗೆ ಬಂದವಳೇ, ಬಾಗಿಲು ಹಾಕಿ ಬಿಟ್ಟಳು.
'ಸೂಪರ್..ಅಂಡ್ ವಂಡರ್ ಫುಲ್ ಆಟ..ನಾನಂತೂ ಕಳೆದು ಹೋಗ್ಬಿಟ್ಟೆ...ಎಂದು ನನ್ನನ್ನ ಬಿಗಿದಪ್ಪಿದಳು.ಆನಂತರ , 'ಅದಿರ್ಲಿ...ಈಗ ಮತ್ತೊಂದು ಗಂಡಾಂತರ ಕಾದಿದೆ..ನೀನಿಲ್ಲಿಂದ ತಪ್ಪಿಸ್ಕೊಬೇಕು..' ಎಂದಳು. ನಾನು ಅವಾಕ್ಕಾದೆ. ಅಂದರೆ ಇವಳಿಗೆ ಎಲ್ಲವೂ ಗೊತ್ತಿದೆ.! 'ನಿಮಗೆ..ಗೊತ್ತಾ?'
'ಗೊತ್ತಿಲ್ಲದೇ ಏನು? ಅವನೊಬ್ಬ ರೋಗ್..ಇರ್ಲಿ..ಈವತ್ತು ಅವನಿಗೆ ಸೋಕ್ಕಿಳಿದಿದೆ..ನೋಡಿ..ಈ ಕಿಟಕಿಯಿಂದ ಪೈಪ್ ಹಿಡಿದು ಕೆಳಕ್ಕೆ ಜಾರಿದರೆ ಸೀದಾ ಪಾರ್ಕಿಂಗ್ ಲಾಟ್ ಹತ್ತರ ಹೋಗ್ತೀರಾ..ಅಲ್ಲಿ ಕಾರು ತಗೊಂಡು ಎಸ್ಕೇಪ್ ಆಗ್ಬಿಡಿ..ಅಲ್ಲಿವರೆಗೆ ನಾನು ಯಾರೂ ಬರದೆ ಇರೋಹಂಗೆ ನೋಡ್ಕೋತೀನಿ..ಈ ತರಹ ಬಾಗಿಲು ಹಾಕಿದ್ರೆ ಕಷ್ಟ..?'
ಆದರೆ ನನ್ನ ಹತ್ತಿರ ಕಾರಿಲ್ಲ...?
ನಾನು ಹೇಳಿದ್ದು ನನ್ನ ಕಾರು ಬಗ್ಗೆ...ಕಪ್ಪು ಕಲರ್ ಕಾರು, ಸ್ವಿಫ್ಟ್ ಡಿಸೈರ್...ಬೇಗ..ನಂಬರ್ 1848 ಕಾರಲ್ಲಿ ಒಳಗೆ ನನ್ನ ಗಂಡ ಕುಳಿತಿರತಾರೆ..ನಾನು ಎಲ್ಲಾ ಹೇಳಿದ್ದೀನಿ..ಬೇಗ  ಹರಿ ಅಪ್...'
ನಾನು ಮಾತಾಡದೆ ಅವಳೆಡೆಗೆ ನೋಡಿದೆ. ನಂತರ ಅವಳು ಹೇಳಿದ ಹಾಗೆ ಕಿಟಕಿಯಿಂದ ತೋರಿ ಪ್ರಯಾಸ ಪಟ್ಟು ಕೆಳಗಿಳಿದೆ. ಅವಳ ಕಾರಿನ ಹತ್ತಿರ ಬಂದ ತಕ್ಷಣ ಅವಳ ಗಂಡ ಬಾಗಿಲು ತೆರೆದೆ. ಅವನೊಂದು ಪ್ರಯಾಸದ ನಗೆ ಬೀರಿದ. ನಾನು ಕುಳಿತ ಒಂದೆ ನಿಮಿಷಕ್ಕೆ ಅವಳು ಬಂದಳು. ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಳು. ಅಷ್ಟೇ ಕಾರು ಶರವೇಗದಿಂದ ಅಲ್ಲಿಂದ ಮುನ್ನುಗ್ಗಿತು.
ಆದರೆ ನಾನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. ಇಷ್ಟೊತ್ತಿಗೆ ಇಡೀ ಕೋಣೆ ಹುಡುಕುತ್ತಿರುತ್ತಾರೆ. ಇಲ್ಲ ಎಂದು ಗೊತ್ತಾದ ತಕ್ಷಣ..
'ಅಲ್ನೋಡು..ಪೋಲಿಸ್ ಚೆಕಿಂಗ್ ನಡೀತಾ ಇದೆ...' ಅವಳ ಗಂಡ ಗಾಬರಿಯಿಂದ ಕೂಗಿದ. ನಾನಂದುಕೊಂಡದ್ದಕ್ಕಿಂತ ಪತ್ತರ್ ಖದರ್ ಜಾಸ್ತಿಯೇ ಇತ್ತು.ನಾನು ಸೀಟಿನಲ್ಲಿ ಹಾಗೆಯೇ ಕೆಳಗೆ ಬಗ್ಗಿ ಅಡ್ಡಡ್ಡ ಮಲಗಿದೆ. ಆದರೂ ಸಿಕ್ಕಿಹಾಕಿಕೊಳ್ಳುವ ಅವಕಾಶ ಇತ್ತು.
ನಾವು ಇನ್ನೇನು ಚೆಕಿಂಗ್ ಹತ್ತಿರ ಬಂದೆವು. ಪೋಲಿಸರು ಮತ್ತು ಅವರ ಜೊತೆಗೆ ಒಂದಿಬ್ಬರು ಪತ್ತರ್ ಕಡೆಯವರು ಕಾರಗಳ ಒಳಗೆಲ್ಲಾ ಪರೀಕ್ಷೆ ಮಾಡುತ್ತಿದ್ದರು. ನಾನು ಉಸಿರು ಬಿಗಿ ಹಿಡಿದು ಮಲಗಿದ್ದೆ. ಆದರೆ ಇದ್ದಕ್ಕಿದ್ದಂತೆ ಕಾರಿನ ವೇಗ ಹೆಚ್ಚಾಯಿತು. ಏನಾಯಿತು ಎಂಬುದು ಗೊತ್ತಾಗುವಷ್ಟರಲ್ಲಿ ಕಾರು ಶರವೇಗದಲ್ಲಿ ಅಲ್ಲಿಂದ ಹೊರಟಿತ್ತು. ನಾನು ತಲೆ ಎತ್ತಿದೆ.
'ಇದೊಂದೇ ದಾರಿಯಿದ್ದದ್ದು..ಇಲ್ಲಾಂದ್ರೆ ತಪ್ಪಿಸಿಕೊಳ್ಳೋಕೆ ಸಾಧ್ಯಾನೆ ಇರ್ತಿರಲಿಲ್ಲ..' ನಾನು ಕೇಳದಿದ್ದರೂ ಸಮಜಾಯಿಷಿ ಕೊಟ್ಟ ಆಕೆ ಕಾರಿನ ವೇಗವನ್ನು ಇನ್ನೂ ಹೆಚ್ಚಿಸಿದಳು. ಸ್ವಲ್ಪ ಹೊತ್ತಿನಲ್ಲೇ ಒಂದು ಪೋಲಿಸ್ ಜೀಪು, ಎರಡು ಕಾರು ಮತ್ತು ಎರಡು ಬೈಕುಗಳು ನಮ್ಮ ಹಿಂದೆ ಬಿದ್ದದ್ದು ಗೊತ್ತಾಯಿತು. ನಮ್ಮ ಕಾರಿನ ವೇಗ ಇನ್ನೂ ಹೆಚ್ಚಿತ್ತು. ಯಾವುದೋ ಕಾರ್ ರೇಸ್ನಲ್ಲಿನ ಕಾರುಗಳು ಓಡುತ್ತಿರುವ ಹಾಗೆ ಭಾಸವಾಗುತ್ತಿತ್ತು.ಅಷ್ಟರಲ್ಲಿ ಗುಂಡು ಬಂದು ಕಾರಿನ ಸೀಟಿನ ಹಿಂಬದಿಗೆ ಬಿತ್ತು. ಅವಳ ನಿಯಂತ್ರಣ ಒಂದು ಕ್ಷಣ ತಪ್ಪಿತಷ್ಟೇ..ಕಾರು ಅಡ್ಡಾ ದಿಡ್ಡಿ ಚಲಿಸಿ ಮುಂದಿನ ಕಾರಿಗೆ ಡಿಕ್ಕಿ ಹೊಡೆದು ಮೇಲೆ ಹಾರಿತು. ಅಷ್ಟೇ ಅಮೇಲೆನಾಯಿತೋ ನನಗೆ ಗೊತ್ತಾಗಲಿಲ್ಲ.
******
ಕಣ್ಣು ಬಿಟ್ಟಾಗ ನಾನು ಆಸ್ಪತ್ರೆಯಲ್ಲಿದ್ದೆ. ತಲೆ ಧಿಂ ಎನ್ನುತ್ತಿತ್ತು. ಅಬ್ಬಾ ಬದುಕಿದ್ದೇನ? ಅವಳು ಅವಳ ಗಂಡ ಬದುಕಿರಬಹುದಾ..?ಆದರೆ ನನಗೆ ಮತ್ತೆ ಪ್ರಜ್ಞೆ ತಪ್ಪಿತ್ತು. ಮತ್ತೆ ಪ್ರಜ್ಞೆ ಬಂದಾಗ ನನ್ನ ಎದುರಿಗೆ ವೈದ್ಯರುಗಳ ಗುಂಪೇ ಇತ್ತು.
'ಹೇಗಿದ್ದೀರಾ ಮಿಸ್ಟರ್..' ಎಂದರು. ನಾನು ನಕ್ಕೆ. ಮಾತಾಡಲು ಸಾಧ್ಯವಾಗಬಹುದಾ?
'ಹಿ ಇಸ್ ಪೆರ್ಫೆಕ್ಟ್ಲಿ ಆಲ್ರೈಟ್ ...' ಎಲ್ಲರೂ ಅತ್ತ ಹೋದರು. ನಾನು ಎದ್ದು ಕುಳಿತುಕೊಳ್ಳುವ ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಆಗ ಹತ್ತಿರ ಬಂದ ವೈದ್ಯರು,
'ಏನು.ನೀವೀಗ ಹುಶಾರಿದ್ದೀರಾ...ಇನ್ನೆರೆಡು ದಿನ ನೀವು ಓಡಾಡಬಹುದು..' ಎಂದರು.
'ಡಾಕ್ಟ್ರೆ...ಅವಳು ಹುಶಾರಿದ್ದಾಳಾ..?' ಎಂದೆ.
ಅವರು ಒಮ್ಮೆ ನಕ್ಕು ಹೌದು ಎನ್ನುವಂತೆ ತಲೆಯಾಡಿಸಿ ಅಲ್ಲಿಂದ ಹೊರಟುಹೋದರು. ನಾನು ಆಸ್ಪತ್ರೆಯನ್ನೊಮ್ಮೆ ಗಮನಿಸಿದೆ. ಎಲ್ಲಾ ಕನ್ನಡದಲ್ಲಿತ್ತು. ಡಾಕ್ಟರು ಕೂಡ ಕನ್ನಡದಲ್ಲಿ ಮಾತನಾಡುತ್ತಿದ್ದರು. ನನಗೆ ಆಶ್ಚರ್ಯವಾಗತೊಡಗಿತು.ಇದೇನಿದು..ಅಪಘಾತವಾದದ್ದು ಮುಂಬೈನಲ್ಲಿ ಅಲ್ಲಿಂದ ಬೆಂಗಳೂರಿಗೆ ಆಸ್ಪತ್ರೆಗೆ ನನ್ನನ್ನು ಕರೆತಂದು ಸೇರಿಸಿದವರಾದರೂ ಯಾರು?
ಸ್ವಲ್ಪ ಹೊತ್ತಿನ ನಂತರ ಒಬ್ಬ ಪೋಲಿಸ್ ಅಧಿಕಾರಿ ಒಳಬಂದವನು , ನನ್ನ ಪಕ್ಕ ಕುಳಿತುಕೊಂಡ.ಅವನಾಗಲೇ ನನ್ನೊಡನೆ ಮಾತಾಡಲು ವೈದ್ಯರ ಜೊತೆ ವಾದವಿವಾದ ಮಾಡಿ ಬಂದಿದ್ದ.
ನನ್ನನ್ನೊಮ್ಮೆ ದಿಟ್ಟಿಸಿ,
'ಅವಳು ಯಾರು?'
'ಸಾರ್ ನನಗೆ ಗೊತ್ತಿಲ್ಲ ..ಅವಳ ಹೆಸರೂ ಕೂಡ ಗೊತ್ತಿಲ್ಲ ಸಾರ್ ಹೇಗಿದ್ದಾಳೆ ಅವಳು..? ನಾನು ಕಾತರನಾಗಿ ಕೇಳಿದೆ.
ಅವನೊಂದು ನಿಟ್ಟುಸಿರು ಬಿಟ್ಟು '
ಅವಳು ಬದುಕಿಲ್ಲ. ಅಪಘಾತದ ಫೋರ್ಸ್ ಹೇಗಿತ್ತು ಅಂದ್ರೆ ಅವಳ ದೇಹಾನ ಹಾರೆ ಹಾಕಿ ಮೀಟಿ ತೆಗೀಬೇಕಾಯ್ತು..'
ನನಗೆ ಒಂತರಾ ಆಯಿತು. ' ಸಾರ್ ..ಹಿಂದಿನ ಸೀಟಿನಲ್ಲಿದ್ದರಲ್ಲ ಅವಳ ಗಂಡ..ಅವರು ಬದುಕಿದ್ದಾರೆ ತಾನೇ..?..
'ಮಿಸ್ಟರ್...ಹಿಂದಿನ ಸೀಟಿನಲ್ಲಿ ಯಾರೂ ಇರಲಿಲ್ಲ...ನೀನು ಡ್ರೈವ್ ಸೀಟಲ್ಲಿದ್ದೆ..ನಿನ್ನ ಪಕ್ಕ ಅವಳಿದ್ದಳು..ಈಗ ಹೇಳು ಆಕ್ಸಿಡೆಂಟ್ ಹೇಗೆ ನಡೀತು..ಹಾ..ಅವಳ ಹೆಸರೂ ಗೊತ್ತಿಲ್ಲ ಅಂತೀಯಾ..ಹಾಗಾದರೆ ಆವತ್ತು ರಾತ್ರಿ ನೀವಿಬ್ರೆ ಬೆಂಗಳೂರಿಂದ ಹೊರಗೆ ಅಷ್ಟು ವೇಗವಾಗಿ ಕಾರನ್ನು ಯಾಕೆ ಓಡಿಸ್ತಿದ್ರಿ..ಎಲ್ಲಿಗೆ ಹೋಗ್ತಿದ್ರೀ..'
ನನಗೆ ಅಯೋಮಯ ಎನಿಸಿತು. ಏನು ಈ ಯಪ್ಪಾ ಏನೇನೋ ಮಾತಾಡುತ್ತಿದ್ದಾನೆ..ನಾನು ಬೆಂಗಳೂರಾ? ಡ್ರೈವಿಂಗ್ ಸೀಟಾ?
'ಸಾರ್..ನೀವು ಏನು ಹೇಳ್ತಾ ಇದ್ದೀರೋ ನನಗೆ ಗೊತ್ತಾಗಲಿಲ್ಲ. ಆಕ್ಸಿಡೆಂಟ್ ನಡೆದಿರೋದು ಮುಂಬೈನಲ್ಲಿ. ನಾನು ಬೆಂಗಳೂರು ನೋಡೇ ಇಲ್ಲ. ನನಗೆ ಚೆನ್ನಾಗಿ ನೆನಪಿದೆ. ಆವತ್ತು ಜುಲೈ 28. ಪತ್ತರ್ ಕಡೆ ಶಿವನ ಜೊತೆ ಫೈಟ್ ಮಾಡಿದೆ..ಗೆದ್ದೇ..ಆಯಮ್ಮ ಸಿಕ್ಕಿದ್ಳು..ತಪ್ಪಿಸಿಕೊಳ್ಳೋವಾಗ ಆಕ್ಸಿಡೆಂಟ್ ಆಯ್ತು. ಅವಳ ಕಾರು ಸ್ವಿಫ್ಟ್ .'
ಈಗ ಪೋಲಿಸ್ ಗೊಂದಲಕ್ಕೆ ಬಿದ್ದ.
'ಡಾಕ್ಟರು ಎಲ್ಲಾ ಸರಿಯಾಗಿದೆ ಅಂದ್ನಲ್ಲ.' ಎಂದು ತನ್ನಲ್ಲೇ ಗೊಣಗಿಕೊಂಡ.ನಂತರ ನನ್ನ ಹತ್ತಿರ ಮುಖ ತಂದು,
'ಮಿಸ್ಟರ್..ಆಕ್ಸಿಡೆಂಟ್ ನಡೆದಿರೋದು ಜುಲೈ 28 ಅಲ್ಲ..ಸೆಪ್ಟೆಂಬರ್ 12. ನಡೆದಿರೋದು ಹೆಬ್ಬಾಳ್ ರಿಂಗ್ ರೋಡಲ್ಲಿ...ಕಾರು ಸ್ವಿಫ್ಟ್ ಅಲ್ಲ. ಬಿಎಂಡಬ್ಲ್ಯೂ. ..'ನಾನು ಅವನನ್ನೇ ಗೊಂದಲದಲ್ಲಿ ನೋಡಿದೆ. ಆದವನಿಗೆ ಅರ್ಥವಾಗಿರಬೇಕು. ತನ್ನ ಬಳಿಯಲ್ಲಿದ್ದ ಫೈಲಿನಿಂದ ಒಂದಷ್ಟು ಪೇಪರ್ ಕಟಿಂಗ್ಸ್, ಫೋಟೋಗಳನ್ನೂ ಹೊರತೆಗೆದ.
ಹೌದು ಆಕ್ಸಿಡೆಂಟ್ ಆದದ್ದು ಸೆಪ್ಟೆಂಬರ್ 12. ಅದು ದಿನಪತ್ರಿಕೆಯಿಂದ ಖಾತರಿಯಾಯಿತು. ಫೋಟೋದಲ್ಲಿ ಬಿಮ್ಡಬ್ಲ್ಯೂ ಕಾರು ನಜ್ಜುಗುಜ್ಜಾಗಿತ್ತು. ಹೌದು ನಾನೇ ಡ್ರೈವಿಂಗ್ ಸೀಟಲ್ಲಿದ್ದೆ. ಪಕ್ಕದಲ್ಲಿ ಯಾರೋ ಹೆಂಗಸು ವಿಕಾರವಾಗಿ ಮುಖವೆಲ್ಲಾ ಜಜ್ಜಿಹೊಗಿತ್ತು.
ನಾನು ಸ್ವಲ್ಪ ಹೊತ್ತು ಸುಮ್ಮನೆ ಮಲಗಿಬಿಟ್ಟೆ. ಕಣ್ಣು ಮುಚ್ಚಿಕೊಂಡು ಯೋಚಿಸತೊಡಗಿದೆ. ನನಗೆಲ್ಲಾ ನಿಚ್ಚಳವಾಗಿತ್ತು. ಬಾಂಬೆ, ಫೈಟ್, ಪತ್ತರ್, ಆಕ್ಸಿಡೆಂಟ್ ಮತ್ತು ಜುಲೈ 28.
ಆದರೆ ಇಲ್ಲಿ ಕಥೆಯೇ ಬೇರೆಯಿತ್ತು.
ಆಕ್ಸಿಡೆಂಟ್ ಸೆಪ್ಟೆಂಬರ್ 12 ರಂದು ಬಿಎಂಡಬ್ಲ್ಯೂ ಕಾರಿನಲ್ಲಿ ನಾನೇ ಡ್ರೈವ್ ಮಾಡುವಾಗ ನಡೆದಿತ್ತು. ಅದೂ ಬೆಂಗಳೂರಿನಲ್ಲಿ. ಏನಿದು..?
ಒಂದಕ್ಕೊಂದು ತಾಳೆಯಾಗದೆ ತಲೆ ಸಿಡಿಯತೊಡಗಿತ್ತು.
ಆಕ್ಸಿಡೆಂಟ್ ಸ್ಥಳದಿಂದ ಪ್ರಜ್ಞೆತಪ್ಪಿದ್ದ ನನ್ನನ್ನು ಹೊರಕ್ಕೆ ಎಳೆಯುತ್ತಿರುವುದು, ಆಂಬುಲೆನ್ಸ್ ಗೆ ಹಾಕುತ್ತಿರುವುದು ಎಲ್ಲಾ ಪೋಲಿಸ್ ತೋರಿಸಿದ ಫೋಟೋದಿಂದಾಗಿ ನಂಬಲೇಬೇಕಿತ್ತು.
ಅಂದರೆ 45 ದಿನ ನನ್ನ ಕೈಗೆ ಸಿಕ್ಕಿರಲಿಲ್ಲ. ಬಾಂಬೆಯಿಂದ ತಪ್ಪಿಸಿಕೊಂಡ ನಾನು ಬೆಂಗಳೂರಿಗೆ ಬಂದು ಬಿಎಂಡಬ್ಲ್ಯೂ ಕಾರಿನ ಓನರ್ ಆಗಿ, ಪಕ್ಕದಲ್ಲಿ ಹುಡುಗಿಯನ್ನು ಕೂರಿಸಿಕೊಂಡು....ಇದೆಲ್ಲಾ ಹೇಗೆ ಸಾಧ್ಯ..ಹಾಗಾದರೆ ನಾನಾವತ್ತು ಬಾಂಬೆನಲ್ಲಿ ಸಾಯಲಿಲ್ಲವಾ..?
45 ದಿನಗಳಲ್ಲಿ ಏನೋ ಗಣನೀಯವಾದದ್ದು ನಡೆದಿತ್ತು. ನಾನದನ್ನು ಕಂಡು ಹಿಡಿಯಲೇ ಬೇಕಿತ್ತು. ನನ್ನ ಬದುಕೇ ನನಗೆ ರೋಚಕವಾಗಿಯೂ ಕುತೂಹಲವಾಗಿಯೂ ಮತ್ತು ರಹಸ್ಯಮಯವಾಗಿಯೂ ತೋರುತಿತ್ತು.
*********************************
ಮೊನ್ನೆ ಎಲ್ಲೋ ಒಂದು ಕಡೆ ಬೆಳಗಿನಿಂದ ಸಂಜೆಯವರೆಗೆ ಕುಳಿತಿರಬೇಕಾಯಿತು. ನಾನು ಅಂತಹ ಸಂದರ್ಭಗಳಲ್ಲಿ ಒಂದಷ್ಟು ಪುಸ್ತಕದ ಮೊರೆ ಹೋಗುತ್ತೇನೆ. ಗೆಳೆಯರು ಜೊತೆಯಲ್ಲಿದ್ದರೆ ಕಾಡು ಹರಟೆ ಇದ್ದದ್ದೇ. ಆದರೆ ಆವತ್ತು ಯಾರೂ ಇರಲಿಲ್ಲ. ಹಾಗಂತ ಗಂಭೀರವಾಗಿ ಏನನ್ನಾದರೂ ಓದಲಿಕ್ಕೆ ತೆಗೆದುಕೊಂಡೂ ಹೋಗುವ ಹಾಗಿರಲಿಲ್ಲ. ಅಲ್ಲಿ ಮದ್ಯೆ ಮದ್ಯೆ ಏನೋ ವಿಚಾರಿಸುವದಿತ್ತು. ಅಂತಹ ಸಂದರ್ಭಗಳಲ್ಲಿ ನನ್ನನು ಕಾಪಾಡಿರುವ ವ್ಯಕ್ತಿ ಜೇಮೆಸ್ ಹಾಡ್ಲಿ ಚೇಸ್. ಆತನ ಸ್ಟ್ರಿಕ್ಟ್ಲಿ ಫಾರ್ ಕ್ಯಾಶ್ ಕಾದಂಬರಿ ನನಗೆ ಥ್ರಿಲ್ ಕೊಟ್ಟಿತ್ತು. ರೋಚಕವಾಗಿ ಓದಿಸಿಕೊಳ್ಳುವ ಕಾದಂಬರಿ ಅದು. ಮೊನ್ನೆ ಬಂದಡ್ಯಾನಿ ಬಾಯ್ಲ್ ನಿರ್ದೇಶನದ ಟ್ರಾನ್ಸ್, ಹಿಂದಿಯ ಘನ್ ಚಕ್ಕರ್ ಚಿತ್ರಗಳ ಕಥೆಯಂತೆಯೇ ಇದೂ ಇದ್ದದ್ದು ಇನ್ನಷ್ಟು ಕುತೂಹಲ ತರಿಸಿತ್ತು. ಟೈಮ್ ಪಾಸ್ ಗೆ ಉತ್ತಮ ಕಾದಂಬರಿ.