Tuesday, October 29, 2013

ಜೋಗಿಯವರ ಚಿಕ್ಕಪ್ಪ...

ಚಿಕ್ಕಪ್ಪ ಸಾಮಾನ್ಯನಲ್ಲ, ಆತಯಾರು ಆ ಊರಿಗೆ ಅವನು ಬಂದದ್ದಕ್ಕೆ ನಿರ್ಧಿಷ್ಟವಾದ ಉದ್ದೇಶವೆನಾದರೂ ಇರಬಹುದಾ..? ಆತನ ಹಿನ್ನೆಲೆ ಏನು ಎಂಬಿತ್ಯಾದಿ ಪ್ರಶ್ನೆಗಳು ಚಿಕ್ಕಪ್ಪ ಕಾದಂಬರಿಯ ಲೇಖಕರನ್ನು ಕಾಡಿದಂತೆ ಓದುಗನನ್ನೂ ಕಾಡುತ್ತದೆ.ಚಿಕ್ಕಪ್ಪ ತೀರಾ ದೊಡ್ಡದಾದ ಪುಸ್ತಕವಲ್ಲ. ಮೂರು ತಾಸಿನಲ್ಲಿ ಓದಿಬಿಡಬಹುದಾದ ಪುಸ್ತಕ.ಚಿಕ್ಕಪ್ಪ ಎನ್ನುವವನ ಜೀವನದ ಕಥೆಯಲ್ಲ. ಬದಲಿಗೆ ಅದೊಂದು ವರದಿ ಎಂದರೆ ಸೂಕ್ತವೆನಿಸಬಹುದು.
ಚಿಕ್ಕಪ್ಪ ಕಾದಂಬರಿಯಲ್ಲಿ ಬರುವ ಚಿಕ್ಕಪ್ಪನ ಪಾತ್ರವೇ ಅಂತಹದ್ದು. ಹಂತಹಂತವಾಗಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಇಡೀ ಊರನ್ನೇ ಆ ಮೂಲಕ ಇಡೀ ಒಂದು ಸಮುದಾಯವನ್ನೇ ಅದರ ಜೊತೆಗೆ ಒಂದು ಪೀಳಿಗೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಚಿಕ್ಕಪ್ಪ ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಜೋಗಿಯವರು ಬರೆದಿದ್ದಾರೆ. ಅಥವಾ ಅವರೇ ಹೇಳುವಂತೆ ಅದನ್ನು ದಾಖಲಿಸಿದ್ದಾರೆ. ಅಲ್ಲಿ ಹೀಗೇನಾದರೂ ನಡೆದಿತ್ತಾ ಎಂಬ ಪ್ರಶ್ನೆ ಗೆ ನಡೆದಿದ್ದರೂ ನಡೆದಿರಬಹುದು ಎಂಬ ಉತ್ತರ ಬರುತ್ತದೆ. ಅದನ್ನು ಲೇಖಕರು ಕೊಡುವುದಿಲ್ಲ. ಅಥವಾ ಆ ಪಾತ್ರ ಸ್ಪಷ್ಟವಾಗಿ ಹೇಳುವುದಿಲ್ಲ. ಬದಲಿಗೆ ಓದುತ್ತಾ ಓದುತ್ತಾ ನಮಗೆ ಅನಿಸುತ್ತದೆ. ಜೊತೆಗೆ ನಮ್ಮೂರಿನಲ್ಲಿ ಇದ್ದ ಅವನನ್ನೇ ಹೋಲುವ ವ್ಯಕ್ತಿಯ ನೆನಪಾಗುತ್ತದೆ. ಹಾಗಾಗಿಯೇ ಜೋಗಿ ಇದು ನಿಮ್ಮೂರಿನ ಕಥೆಯೂ ಇರಬಹುದು ಅಥವಾ ನಿಮ್ಮೂರಲ್ಲಿಯೂ ಒಬ್ಬ ಚಿಕ್ಕಪ್ಪ ಇರಬಹುದು ಎನ್ನುತ್ತಾರೆ.
ಆದರೆ ಚಿಕ್ಕಪ್ಪ ಒಂದು ಕಾದಂಬರಿ ಎನಿಸಿಕೊಳ್ಳುವುದಕ್ಕಿಂತ ಒಬ್ಬ ವ್ಯಕ್ತಿಯ ಕುರಿತಾದ ವರದಿ ಎನಿಸಿಕೊಳ್ಳುತ್ತದೆ. ನನ್ನ ಪ್ರಕಾರ ಅದೇ ಪುಸ್ತಕದ ಧನಾತ್ಮಕ ಅಂಶ. ಹಾಗೆಯೇ ಅದುವೇ ಪುಸ್ತಕದ ಋಣಾತ್ಮಕ ಅಂಶ ಎನಿಸದೆ ಇರದು. ಒಬ್ಬ ವ್ಯಕ್ತಿಯ ಚಿತ್ರಣವನ್ನು ಜೋಗಿ ತುಂಬಾ ವಿವರವಾಗಿಯೇ ಕಟ್ಟಿಕೊಟ್ಟಿದ್ದಾರೆ. ಆದರೂ ಅದೊಂದು ಪರಿಪೂರ್ಣ ಕಾಲ್ಪನಿಕ ಕಥಾನಕ ಅನಿಸುವುದಿಲ್ಲ. ಅಥವಾ ಸಂಪೂರ್ಣ ವ್ಯಕ್ತಿಯೊಬ್ಬನ ಜೀವನ ಚರಿತ್ರೆ ಅನಿಸುವುದಿಲ್ಲ. ಹಾಗಾಗಿಯೇ ಚಿಕ್ಕಪ್ಪನ ಪಾತ್ರ ಇಷ್ಟವಾದರೂ ಕಾದಂಬರಿ ಕಾಡುವುದು ಅನುಮಾನ.ಸರಾಗವಾಗಿ ಓಡಿಸಿಕೊಂಡು ಹೋಗುವ ಕಾದಂಬರಿ ಬೇಗನೆ ಮುಗಿದುಹೋಗುತ್ತದೆ. ಕೊನೆಯಲ್ಲಿ ಇಷ್ಟೇನಾ..? ಇನ್ನೂ ಏನಾದರೂ ಇರಬೇಕಿತ್ತು ಎನಿಸುತ್ತದೆ.
ಚಿಕ್ಕಪ್ಪ ಕಾದಂಬರಿ ಓದುವಾಗ ಬೇಸರ ತರಿಸುವುದಿಲ್ಲವಾದರೂ ಜೋಗಿಯವರದೇ ಕೃತಿಯಾದ ಗುರುವಾಯನ ಕೆರೆಯ ರೀತಿ ಅಚ್ಚರಿ ಹುಟ್ಟಿಸುವುದಿಲ್ಲ. ಹಾಗೆಯೇ ಅದರಲ್ಲಿನ ಪಾತ್ರಗಳಂತೆ ಕಾಡುವುದಿಲ್ಲ.
ನನಗೆ ಮಂಗಳೂರು ಸುಳ್ಯ ಮುಂತಾದವುಗಳ ಪರಿಚಯ ಅಷ್ಟಾಗಿ ಇರಲಿಲ್ಲ. ಮೊದಲೆಲ್ಲಾ ಸಿನಿಮಾದ ಕೆಲಸಗಳಿಗೆ ಹೋಗುತ್ತಿದ್ದೆವಾದರೂ ಆವಾಗ ಊರನ್ನು ಅಷ್ಟು ಚೆನ್ನಾಗಿ ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನನಗೆ ಈಗ ಸುಳ್ಯ ಮಾವನ ಮನೆಯಾದ್ದರಿಂದ ಅಲ್ಲಿ ಹೋಗಿ ವಾರಗಟ್ಟಲೆ ಉಳಿಯುವುದರಂದ ಅಲ್ಲಿನ ಜನಜೀವನ ಸ್ಥಳ ಪರಿಚಿತವಾಗಿವೆ. ಹಾಗಾಗಿಯೇ ಜೋಗಿಯವರ ಚಿಕ್ಕಪ್ಪ ಓದುವಾಗ ಪುಸ್ತಕದಲ್ಲಿ ಬರುವ ಸಂಪಾಜೆ, ಉಪ್ಪಿನಂಗಡಿ, ಮಂಗಳೂರು ಮುಂತಾದವು ಪರಿಚಿತ ಅನಿಸುತ್ತದೆ. ಹಾಗೆಯೇ ಅಲ್ಲಿಯ ರಾಗಯುತವಾದ ಗ್ರಾಂಥಿಕ ಭಾಷೆ ಖುಷಿ ಕೊಡುತ್ತದೆ. ಅಲ್ಲಲ್ಲಿ ಕೇಳಿ ಬರುವ ಬರ್ಪುಂಡ..ಒಣಸಾಂಡ ತುಳು ಕಿವಿಗೆ ಹಿತ ಎನಿಸದಿದ್ದರೂ ಇತ್ತೀಚಿಗೆ ಕಿರಿಕಿರಿ ಉಂಟುಮಾಡುವುದಿಲ್ಲ. ಹಾಗಾಗಿಯೇ ಚಿಕ್ಕಪ್ಪ ಕಾದಂಬರಿ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಯಿತು ಎನ್ನಬಹುದು. ಆದರೂ ಅದ್ಯಾಕೆ ಬೇರೆ ಕಾದಂಬರಿಗಳ ಹಾಗೆ ಸೆಳೆಯಲಿಲ್ಲ ಎನ್ನುವ ಪ್ರಶ್ನೆ ಹಾಗೆಯೇ ನನ್ನಲ್ಲಿ ಉಳಿದುಕೊಂಡಿದೆ. ಚಿಟ್ಟೆ ಹೆಜ್ಜೆ ಜಾಡು, ಯಾಮಿನಿ, ಹಿಟ್ ವಿಕೆಟ್ ಮುಂತಾದ ಕಾದಂಬರಿಗಳು ಅವುಗಳ ಸತ್ವ ಚೆನ್ನಾಗಿಯೇ ಇದೆ. ಆದರೆ ಅದ್ಯಾಕೋ ತೀರಾ diluted ಎನಿಸುತ್ತದೆ. ಸುಮ್ಮನೆ ಕುಳಿತು ಸರಾಗವಾಗಿ ಬರೆದಂತೆ ಭಾಸವಾಗುತ್ತದೆ. ಅದರಲ್ಲೂ ಚಿಕ್ಕಪ್ಪ ಮತ್ತು ಚಿಟ್ಟೆಹೆಜ್ಜೆ ಜಾಡು ಕಥಾವಸ್ತುವಿನ ವಿಷಯದಲ್ಲಿ ತುಂಬಾ ಸತ್ವಯುತವಾದವುಗಳು. ಹಾಗೆಯೇ ಕಾದಂಬರಿಯ ದ್ರವ್ಯದಲ್ಲೇ ರೋಚಕತೆ, ರೋಮಾಂಚನವಿದೆ. ಆದರೆ ಕಾದಂಬರಿ ಹಿಡಿಯಾಗಿ ಅದನ್ನು ಕಟ್ಟಿಕೊಡುವದರಲ್ಲಿ ಯಶಸ್ವಿಯಾಗಿಲ್ಲವೇನೋ ಎನಿಸುತ್ತದೆ. ಒಂದು ಕಾದಂಬರಿ ನಾನು ತಿಳಿದ ಮಟ್ಟಿಗೆ ಅದರದೇ ಆದ ಪ್ರಪಂಚವನ್ನು ಹೊಂದಿರುತ್ತದೆ. ಓದುತ್ತಾ ಓದುತ್ತಾ ತನ್ಮಯರಾದಂತೆ ಕಣ್ಮುಂದೆ ಆ ಊರು ಅಲ್ಲಿನ ಘಟನೆಗಳು ಸನ್ನಿವೇಶಗಳು ಕಣ್ಮುಂದೆ ಬರಲು, ಮನಸ್ಸಿನಲ್ಲಿ ಅಚ್ಚೋತ್ತಲು ಪ್ರಾರಂಭಿಸುತ್ತವೆ. ಪುಸ್ತಕ ಓದಿ ಕೆಳಗಿಟ್ಟ ಮೇಲೆ ಆ ಪ್ರಪಂಚದಿಂದ ವಾಸ್ತವಕ್ಕೆ ಬರಲು ಸಮಯ ಹಿಡಿಯುತ್ತವೆ. ಅದರಲ್ಲಿನ ದಟ್ಟತೆ, ಭಾಷಾಪ್ರಯೋಗ ಅಥವಾ ಅಲ್ಲಿನ ದೃಷ್ಟಾಂತಗಳು  ಆ ತೆರೆನಾದ ಗಟ್ಟಿತನವನ್ನು ಅದಕ್ಕೆ ತಂದುಕೊಡುತ್ತವಾ..? 
ಒಟ್ಟಿನಲ್ಲಿ ಒಮ್ಮೆ ಓದಬಹುದಾದ ಪುಸ್ತಕ ಚಿಕ್ಕಪ್ಪ ಎನ್ನಬಹುದು...