Wednesday, June 21, 2017

ಇದು ಸಿನಿಮಾ ಅಲ್ಲ..

ಎಂತೆಂತಾ ಸಿನಿಮಾ ಮಾಡ್ತಾರೆ ಗುರು.. ಇನ್ಮೇಲೆ ಇಂತಹದ್ದೇ ಸಿನಿಮಾ ಮಾಡಿದ್ರೆ ಅವರನ್ನ ಬ್ಯಾನ್ ಮಾಡಬೇಕು ಎಂದು ನಾವು ನೀವು ತೀರಾ ಹಿಂಸಾತ್ಮಕ ಚಿತ್ರವನ್ನು ನೋಡಿದಾಗ ಅಂದುಕೊಂಡಿರಬಹುದು. ಆದರೆ ಒಂದು ಸರ್ಕಾರ ಅಥವಾ ದೇಶ ಒಬ್ಬ ಸೃಜನಶೀಲ ನಿರ್ದೇಶಕನಿಗೆ ನೀನು ಎರಡು ದಶಕಗಳ ಕಾಲ ಸಿನಿಮಾ ಮಾಡಲೇಬೇಡ ಎಂದುಬಿಟ್ಟರೆ..? ಅದಕ್ಕಿಂತ ಘೋರ ಶಿಕ್ಷೆ ಇದೆಯೇ..?
ಇದು ಸಿನಿಮಾ ಅಲ್ಲ.. ಹಾಗಂತ ಯಾರಿಗೆ ಹೇಳಲು ಹೊರಟಿದ್ದಾರೆ ಜಾಫರ್ ಫನಾಹಿ ಎಂಬುದು ಸಿನಿಮಾ ನೋಡು ನೋಡುತ್ತಾ ಗೊತ್ತಾಗುತ್ತದೆ.ಜಾಫರ್ ಫನಾಹಿ ಇರಾನಿಯನ್ ಚಿತ್ರ ನಿರ್ದೇಶಕ. ಸಿನಿರಸಿಕರಿಗೆ ಇರಾನಿಯನ್ ಸಿನಿಮಾಗಳು ಹೊಸದಲ್ಲ. ಅವನ ವೈಟ್ ಬಲೂನ್ ಸಿನಿಮಾ ನೋಡಿದರೆ ನಿಮಗೆ ಗೊತ್ತಾಗುತ್ತದೆ, ಜಾಫರ್ ಫನಾಹಿ ನಿರ್ದೇಶನದ ಪಾಂಡಿತ್ಯ. ತೀರಾ ಸರಳ ಎನಿಸುವ ಕತೆಗಳೇ ಫನಾಹಿ ಚಿತ್ರದ ವಸ್ತುಗಳು. ಹಾಗೆಯೇ ದೃಶ್ಯ ರಚನೆಗಳು ಕೂಡ. ತೀರಾ ಅಬ್ಬರವಿಲ್ಲದ, ಹಾಗೆಯೇ ತೀರಾ ಆಳಕ್ಕಿಳಿಯದ ಇರಾನ್ ಜಗತ್ತನ್ನು ತೆರೆದಿಡುವ ಚಿತ್ರಕತೆ ಆಪ್ತವೆನಿಸುತ್ತದೆ. ಬಹುತೇಕ ಇರಾನಿ ಚಿತ್ರಗಳಂತೆ ದೃಶ್ಯವನ್ನು ಸಾವಧಾನವಾಗಿ  ನಿರೂಪಿಸುತ್ತಾ ಸಾಗುವ ಜಾಫರ್ ದೃಶ್ಯದ ಸಣ್ಣ ಸಣ್ಣ ವಿವರಗಳನ್ನು ತೋರಿಸದೆ ದೃಶ್ಯವನ್ನು ಅಂತ್ಯಗೊಳಿಸುವುದಿಲ್ಲ. ಹೀಗಾಯಿತು., ಹೀಗೆ ನಡೆಯುತ್ತದೆ ಎನ್ನುವ ಮಾತನ್ನು ಹೀಗೆಯೇ ನಡೆಯಿತು ಎನ್ನುತ್ತಾನೆ ತನ್ನ ನಿರೂಪಣೆಯ ಮೂಲಕ ಮತ್ತು ಅಷ್ಟನ್ನೂ ತೋರಿಸಿಯೇ ತೀರುವುದು ಫನಾಹಿ ವೈಶಿಷ್ಟ್ಯ..
ಇಟ್ಸ್ ನಾಟ್ ಎ ಫಿಲಂ ಅವನು ಸಿನಿಮಾ ಮಾಡಬಾರದು ಎಂದು ನಿಷೇಧಕ್ಕೊಳಗಾದಾಗ ನಿರ್ದೇಶಿಸಿದ ಚಿತ್ರ. 20 ವರ್ಷಗಳು ಚಿತ್ರರಂಗದಿಂದ ದೂರ ಇರುವಂತೆ, ಸಂಪೂರ್ಣವಾಗಿ ಚಿತ್ರರಂಗದ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಮುಖ್ಯವಾಗಿ ಚಿತ್ರಕತೆ ನಿರ್ದೇಶನ ಮಾಡದಿರುವಂತೆ ಅಲ್ಲಿನ ಆಡಳಿತಸರ್ಕಾರ ಫನಾಹಿಯನ್ನು ನಿಷೇಧಿಸಿ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅದರ ಅಂತಿಮತೀರ್ಪು ಬರುವವರಗೆ ಗೃಹಬಂಧನಕ್ಕೊಳಗಾದ ಫನಾಹಿ ಸುಮ್ಮನೆ ಕುಳಿತುಕೊಳ್ಳಲು, ಮತ್ತು ತನ್ನ ಸೃಅಜನಶೀಳತೆಯನ್ನು ತೆರೆದಿಡಲು ತಯಾರಿಸಿದ ಚಿತ್ರವಿದು. ಕತೆಯು ತೆರೆದುಕೊಳ್ಳುವುದೇ ಅದರಿಂದ. ಫೋನ್ ಮೂಲಕ ಗೆಳೆಯನಿಗೆ ಫೋನ್ ಮಾಡುವ ಫನಾಹಿ ಸಂಕ್ಷಿಪ್ತವಾಗಿ ನೋಡುಗರಿಗೆ ಸಧ್ಯದ ಪರಿಸ್ಥಿತಿಯನ್ನು ವಿವರಿಸಿಬಿಡುತ್ತಾನೆ. ಆನಂತರ ತನ್ನ ಅಸಹಾಯಕತೆಯನ್ನು ವ್ಯಕ್ತ ಪಡಿಸಲು ಫೋನ್ ಅನ್ನು ಸಶಕ್ತವಾಗಿ ಬಳಸಿಕೊಂಡಿದ್ದಾನೆ. ಹಾಗಾಗಿ ನೋಡುತ್ತಾ ನೋಡುತ್ತಾ ಸಿನಿಮಾ ನಮ್ಮಲ್ಲಿ ಅವನ ಪರಿಸ್ಥಿತಿಯ ಕುರಿತಾಗಿ ವಿಷಾದಭಾವವನ್ನುಂಟುಮಾಡುತ್ತದೆ.
ಆತನೇ ಹೇಳಿದ್ದಾನೆ, ಇದು ಸಿನಿಮಾ ಅಲ್ಲ. ಸಾಕ್ಷ್ಯಚಿತ್ರವಿರಬಹುದು..? ಹೌದು. ಅವನ ಕತೆಯನ್ನು ಅವನೇ ಹೇಳುತ್ತಾ ದೃಶ್ಯ ವಿವರಣೆಗೆ ತನ್ನದೇ ಚಿತ್ರದ ಉದಾಹರಣೆಯನ್ನು ತೋರಿಸುತ್ತಾ ಮಧ್ಯ ಮಧ್ಯ ವ್ಯಕ್ತಿಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಹೇಳಿಯೂ ಹೇಳದಂತೆ ಹೇಳುತ್ತಾ , ತಾನು ಮಾಡಬೇಕೆಂದುಕೊಂಡಿದ್ದ ಚಿತ್ರದ ಕತೆಯನ್ನು ರೂಪುರೇಷೆಯನ್ನು ವಿವರಿಸುತ್ತಾ ಸಾಗುತ್ತಾನೆ.

ಚಿತ್ರ ಒಂದು ಕಾಲು ಘಂಟೆ ಅವಧಿಯದ್ದಾಗಿದೆ. ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಸಿನಿಮಾ ನೋಡುತ್ತಾ ಸಾಗಿದಂತೆ ಇಟ್ಸ್ ನಾಟ್ ಎ ಫಿಲಂ ಸಾಕ್ಷ್ಯಚಿತ್ರಕ್ಕಿಂತ ಹೆಚ್ಚಾಗಿ ಒಂದು ಪ್ರಯೋಗಾತ್ಮಕ ಚಿತ್ರವಾಗಿ ನಮ್ಮನ್ನು ಅಪ್ಪಿಕೊಳ್ಳುತ್ತದೆ.
ಅಂದಹಾಗೆ ಈ ಚಿತ್ರವನ್ನು ತಯಾರಿಸಿ, ಅದನ್ನು ಪೆನ್ ಡ್ರೈವ್ ನಲ್ಲಿಟ್ಟು, ಕೇಕ್ ನೊಳಗೆ ಸೇರಿಸಿ ಕಾನ್ಸ್ ಫಿಲಂ ಫೆಸ್ಟಿವಲ್ ಗೆ ಕಳುಹಿಸಿಲಾಯಿತಂತೆ.

No comments:

Post a Comment