Tuesday, October 24, 2017

ನೋಡಿದ ಸಿನೆಮಾಗಳ ಓದುವ ಖುಷಿ..


ಜಾಗತಿಕ ಅಥವಾ ಕನ್ನಡದ ಅಥವಾ ಭಾರತೀಯ ಭಾಷೆಗಳ ಸಿನಿಮಾ ಬಗೆಗಿನ ಯಾವುದೇ ಪುಸ್ತಕ ಬಂದರೂ ನನಗೊಂತರ ಹಬ್ಬ ಎನಿಸುತ್ತದೆ. ಪುಸ್ತಕ ತೆರೆದು ಸಿನಿಮಾ ಪಟ್ಟಿಯ ಮೇಲೆ ಕಣ್ಣಾಡಿಸುತ್ತಾ ಸಾಗಿದಂತೆ ಆಯಾ ಸಿನೆಮಾಗಳ ಚಿತ್ರಣ ಹಿನ್ನೆಲೆ ಕಣ್ಣ ಮುಂದೆ ಬಂದು ಬಿಡುತ್ತದೆ.ಇಲ್ಲಿಯವರೆಗೆ ಬಂದಿರುವ ಪುಸ್ತಕಗಳಲ್ಲಿನ ಅಷ್ಟೂ ಸಿನಿಮಾಗಳನ್ನು ನಾನು ನೋಡಿದ್ದೇನೆ. ಮೊನ್ನೆ ರವರ ಪುಸ್ತಕ ತೆಗೆದುಕೊಂಡು ಕಣ್ಣಾಡಿಸುತ್ತಾ ಸಾಗಿದಂತೆ ಖುಷಿಯಾಗುತ್ತಾ ಹೋಯಿತು. ಈಗಾಗಲೇ ಅಲ್ಲಿರುವ ಎಲ್ಲಾ ಸಿನಿಮಾಗಳನ್ನು ಬರೀ ನೋಡಿದ್ದೇನೆ ಅಷ್ಟೇ ಅಲ್ಲ, ಕೆಲವು ಸಿನೆಮಾಗಳ ಮೇಲೆ ನಾನೂ ನನ್ನ ಬ್ಲಾಗ್ ನಲ್ಲಿ ಬರೆದಿದ್ದೇನೆ.
ಆದರೆ ಈಗಾಗಲೇ ನೋಡಿದ ಸಿನೆಮಾಗಳ ಬಗೆಗಿನ ಓದುವ ಖುಷಿಯೇ ಬೇರೆ. ನಾವು ಸಿನಿಮಾ ನೋಡಿರುತ್ತೇವೆ. ಅದರಲ್ಲೂ ನಾನಂತೂ ಸಿನಿಮಾದ ಹಿನ್ನೆಲೆ ಮುನ್ನೆಲೆ ನೋಡಿಕೊಂಡು ಅಳೆದು ತೂಗಿ ಸಿನಿಮಾ ನೋಡುವುದಿಲ್ಲ. ನೋಡಿದ ಮೇಲೆಯೇ ನಮ್ಮದು ನಿರ್ಧಾರ. ಚಿತ್ರೋತ್ಸವಗಳಿಗೆ ಹೋದಾಗ ನಾನು ಒಂದು ಸಿನಿಮಾ ಆದ ನಂತೆರ ಪಕ್ಕದ ಪರದೆಗೆ ಜಾರಿಕೊಳ್ಳುತ್ತೇನೆ. ಅಲ್ಲಿ ಯಾವುದಿದ್ದರೂ ನಾನು ನೋಡೇ ನೋಡುತ್ತೇನೆ. ಹಾಗಾಗಿ ಯಾವುದು ಎಂಬುದನ್ನೂ ನಾನು ವಿಚಾರಿಸುವುದೂ ಇಲ್ಲ, ಹಾಗೆಯೇ ಅದರ ನಿರ್ದೇಶಕ ಸಾರಾಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಹಾಗಾಗಿಯೇ ನನಗೆ ಕೆಲವು ಅಪರೂಪದ ವಿಚಿತ್ರವಾದ ವಿಶೇಷವಾದ ಸಿನಿಮಾಗಳು ನೋಡಲಿಕ್ಕೆ ಸಿಕ್ಕಿವೆ ಎನ್ನಬಹುದು. ಸುಮ್ಮನೆ ಬೆಸ್ಟ್ ಮೂವೀಸ್ ಎಂದು ನೀವು ಟೈಪಿಸಿದರೆ ಪ್ರಶಸ್ತಿ ಪುರಸ್ಕೃತ ವಿಮರ್ಷೆಗೆ ಒಳಗಾದ ಸಿನೆಮಾಗಳ ರಾಶಿ ರಾಶಿ ಬಂದು ಬೀಳುತ್ತದೆ, ಮತ್ತವುಗಳ  ಪಟ್ಟಿ ಪುನರಾವರ್ತನೆಯಾಗುತ್ತವೆ. ಹಾಗಾಗಿ ಕೆಲವು ಅಪರೂಪದ ಚಿತ್ರಗಳ ಬಗೆಗೆ ಬರಹಗಳು ತೀರ ಕಡಿಮೆ ಇವೆ. ಅವುಗಳು ಕಣ್ಣಿಗೆ ಕಾಣದೆ ಹಾಗೆಯೇ ಮರೆಯಾಗಿಬಿಡುತ್ತವೆ.
ಕೇಶವ ಮೂರ್ತಿ ಅವರ ಪುಸ್ತಕದಲ್ಲಿನ ಸಿನಿಮಾಗಳು ಈಗಾಗಲೇ ನೋಡಿರುವಂತಹವೇ ಆದರೂ ಅದರ ಬಗೆಗಿನ ಬರಹ ಖುಷಿ ಕೊಡುತ್ತದೆ. ಕೆಲವು ಚಿತ್ರಗಳ ಬಗೆಗಿನ ಹಿನ್ನೆಲೆ ಮುನ್ನೆಲೆ ಮತ್ತು ಸಾರಾಂಶವನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರಿಕೆಯನ್ನು ಕಟ್ಟಿಕೊಡುವ ಬರಹ ಸಿನಿಮಾ ಬಗೆಗಿನ ಕುತೂಹಲವನ್ನು [ನೋಡಿಲ್ಲದಿದ್ದರೆ] ಇಮ್ಮಡಿಯಾಗಿಸುತ್ತದೆ.ಕನ್ನಡ ಬೆಂಗಾಲಿ, ಕೋರಿಯನ್, ಫ್ರೆಂಚ್ ಹೀಗೆ ಎಲ್ಲವನ್ನೂ ಒಟ್ಟಾಗಿಸಿದ್ದಾರೆ, ಹೊಸತು ಹಳತು ಎರಡೂ ಬರಹದಲ್ಲಿವೆ. ಪುಸ್ತಕದಲ್ಲಿ ಅತಿ ಹೆಚ್ಚು ಗಮನ ಸೆಳೆಯುವುದು ಲೇಖನಗಳ ಮುಖ ಬರಹ. ಪುಸ್ತಕದ ಹೆಸರೇ ಖುಷಿಕೊಡುತ್ತದೆ.ಒಟ್ಟಿನಲ್ಲಿ ಸಿನೆಮಾಪ್ರಿಯರಿಗೆ ಒಳ್ಳೆಯ ಪುಸ್ತಕ ...ಆಸಕ್ತರು ಓದಿ ಸಿನಿಮಾ ನೋಡಬಹುದು, ನೋಡಿದ್ದರೆ ಓದಿ ಖುಷಿ ಪಡಬಹುದು.
ಹಾಗೆ ನೋಡಿದರೆ ನಾನು ಕಂಡುಕೊಂಡ ಮಟ್ಟಿಗೆ ಕೇಶವಮೂರ್ತಿ ಅವರ ಸಿನಿಮಾ ಜ್ಞಾನ ಬಹಳ ದೊಡ್ಡದು. ಜಾಗತಿಕ ಸಿನೆಮರಂಗ ಮತ್ತು ನಮ್ಮದೇ ಚಿತ್ರರಂಗವನ್ನು ಜೊತೆ ಜೊತೆಗೆ ಅರಿತುಕೊಂಡಿರುವ ಅದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವವರು ಕೇಶವಮೂರ್ತಿ. ಅವರ ವಿಮರ್ಶೆಗಳನ್ನು ನಾನು ಯಾವಾಗಲೂ ಓದುತ್ತೇನೆ. ಅದಕ್ಕಿಂತ ಹೆಚ್ಚಾಗಿ ಅವರ ಸಿನೆಮಸಂಬಂಧಿ ಬರಹಗಳು ನನಗಿಷ್ಟ. ಅವರ ಹೊಸ ಪುಸ್ತಕ ಎಂದಾಕ್ಷಣ ರೋಮಾಂಚನವಾದದ್ದು ಸುಳ್ಳಲ್ಲ. ಆ ನಿರೀಕ್ಷೆಯನ್ನು ಪುಸ್ತಕ ಹುಸಿಮಾದಿಲ್ಲ ಎನ್ನುವುದು ಖುಷಿಯ ಸಂಗತಿ.

ಕೊನೆಯದಾಗಿ : ನನ್ನದೇ ಪುಸ್ತಕ “ಚಿತ್ರ-ವಿಚಿತ್ರ” [ಇನ್ನೂ ಬಿಡುಗಡೆಯಾಗಿಲ್ಲ]ದಲ್ಲಿ ಅಂತಹ ಅಪರೂಪದ ಚಿತ್ರಗಳ ಬಗೆಗೆ ಮಾಹಿತಿ ಇದೆ. ಇದೆಲ್ಲಾ ನಾನು ಸುಮ್ಮನೆ ಸಿಕ್ಕ ಸಿಕ್ಕ ಸಿನಿಮಾ ನೋಡಿದಾಗ ಸಿಕ್ಕಿದ್ದು. ಯಾರೂ ಉದಾಹರಿಸಿದ, ಯಾರೂ ಹೇಳದ ಸಿನಿಮಾಗಳು ಅವು. ಅವುಗಳನ್ನು ನೋಡಿದಾಗ ಹೀಗೆಲ್ಲಾ ಸಿನಿಮಾ ಮಾಡಿದ್ದಾರಾ..? ಎನ್ನುವ ಅಚ್ಚರಿ ನನಗಂತೂ ಆಗಿದೆ.

No comments:

Post a Comment