Sunday, February 5, 2017

ಪ್ರತಿಭಾನ್ವಿತರನ್ನು ಸೃಷ್ಟಿಸಿ...ಟಿಆರ್ ಪಿಯನ್ನಲ್ಲ...

ಕಿರುತೆರೆ ವಾಹಿನಿಯಲ್ಲಿ ವಾರಕ್ಕೊಂದು ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿವೆ. ಅವುಗಳ ಚಿತ್ರೀಕರಣ ಮತ್ತು ನಿರ್ಮಾಣ ಶೈಲಿಗಳನ್ನು ಕಂಡಾಗ ನಮಗೆ ಅಂದರೆ ಸಿನೆಮಾಜನಕ್ಕೆ ಹೊಟ್ಟೆಕಿಚ್ಚು ಬರುವಂತಿದೆ. ಅಂತಹ ಅದ್ದೂರಿತನ ಶ್ರೀಮಂತಿಕೆ ಕಂಡು ಬರುತ್ತಿವೆ. ಆದರೆ ಸುಮ್ಮನೆ ಅವುಗಳ ಜನಪ್ರಿಯತೆಯ ಅಂಕಗಳನ್ನು ತೆರೆದುನೋಡಿದರೆ ಹಳೆಯ ಧಾರಾವಾಹಿಗಳು ಬಿಟ್ಟರೆ ಹೊಸವುಗಳು ಯಾವುದೂ ಪಟ್ಟಿಯಲ್ಲಿಲ್ಲ. ಈವತ್ತು ಶುರುವಾಗುವ ವಾಹಿನಿಯ ಧಾರಾವಾಹಿಗಳ ಪೋಸ್ಟರ್ ಗಳು ಸಿನೆಮಾಕ್ಕಿಂತಲೂ ಹೆಚ್ಚಾಗಿ ಗೋಡೆಗಳ ಮೇಲೆ ರಾರಾಜಿಸುತ್ತವೆ.ಅವುಗಳ ದೊಡ್ಡ ದೊಡ್ಡ ಹೋರ್ಡಿಂಗ್ಸ್  ಗಳು ಬಣ್ಣಬಣ್ಣವಾಗಿ ಇಡೀ ಬೆಂಗಳೂರು ಸುತ್ತಾಮುತ್ತಾ ಕಣ್ಣು ಕೊರೈಸುತ್ತವೆ.ಪ್ರಾರಂಭದ ಕಂತುಗಳನ್ನು ಕರ್ನಾಟಕದ ಆಚೆಯೂ, ಅಥವಾ ಅದ್ದೂರಿಯಾದ ಸೆಟ್ ನಲ್ಲಿ, ಭಾರೀ ಭರ್ಜರಿಯಾಗಿ ಚಿತ್ರೀಕರಿಸಲಾಗುತ್ತದೆ. ಪ್ರಸಾರದ ಮುನ್ನ ದಿನದಿಂದಲೇ ಕ್ಷಣಗಣನೆ ಶುರು ಮಾಡುತ್ತಾರೆ ವಾಹಿನಿಯವರು. ಜೊತೆಗೆ ಬೇರೆ ಬೇರೆ ವಾಹಿನಿಗಳಲ್ಲಿ ಲಕ್ಷಾಂತರ ಖರ್ಚು ಮಾಡಿ ಜಾಹಿರಾತು ನೀಡುತ್ತಾರೆ, ದಿನಪತ್ರಿಕೆಗಳಲ್ಲಿ ಚಿತ್ರದ ಪ್ರಚಾರ ಚಿತ್ರ ಅರ್ಧ ಪುಟದವರೆಗೆ ಮೆರವಣಿಗೆಯಾಗುತ್ತದೆ. ಮತ್ತೂ ಇಷ್ಟೆಲ್ಲಾ ಅದ್ದೂರಿತನದೊಂದಿಗೆ ಧಾರಾವಾಹಿಯ ಮೊದಲ ಕಂತು ಪ್ರಸಾರವಾಗುತ್ತದೆ. ಆ ವಾರ ಬಿಡಿ, ಒಂದೇ ತಿಂಗಳಿನಲ್ಲಿ ಧಾರಾವಾಹಿ ತನ್ನ ಮಾನದಂಡ ಕಳೆದುಕೊಳ್ಳುತ್ತದೆ. ನೂರು ಕಂತು ಮೀರುವಷ್ಟರಲ್ಲಿ ವೈಂಡ್ ಅಪ್ ಎನ್ನುತ್ತದೆ ವಾಹಿನಿ. ಮತ್ತೊಂದು ಹೊಸ ಧಾರಾವಾಹಿ ಇಷ್ಟರಲ್ಲೇ, ಹೊಸ ಕತೆಯೊಂದಿಗೆ ಎನ್ನುವ ಜಾಹಿರಾತು ಶುರುವಾಗಿರುತ್ತದೆ.
ಯಾಕೆ ಹೀಗೆ..?
ಈವತ್ತು ಯಾವುದೇ ವಾಹಿನಿಯಲ್ಲಿ ಅಥವಾ ಕನ್ನಡದ ಮುಖ್ಯ ವಾಹಿನಿಗಳಲ್ಲಿ ಬರುತ್ತಿರುವ ಧಾರಾವಾಹಿಗಳಲ್ಲಿ ನಂಬರ್ 1 ಸ್ಥಾನದಲ್ಲಿರುವ ಧಾರಾವಾಹಿಗಳು ಹಳೆಯವೇ. ಹಾಗಾದರೆ ಹೊಸ ಧಾರಾವಾಹಿಗಳು ಎಲ್ಲಿ ಹೋದವು..?
ಇನ್ನೊಂದು ಪ್ರಶ್ನೆ ಕೇಳಿಕೊಳ್ಳೋಣ..ಈವತ್ತಿನ ಅಷ್ಟೂ ಧಾರಾವಾಹಿಯನ್ನು ತೆಗೆದುಕೊಳ್ಳಿ. ನಿರ್ದೇಶಕ ಯಾರು ಎಂಬೊಂದು ಪ್ರಶ್ನೆಗೆ ನಿಮಗೆ ಉತ್ತರ ಸುಲಭವಾಗಿ ಸಿಗುವುದಿಲ್ಲ. ಬದಲಿಗೆ ಹುಡುಕಾಡಬೇಕಾಗುತ್ತದೆ. ಮೊದಲೆಲ್ಲಾ ಮಾಯಾಮೃಗ, ಮುಕ್ತಾ, ಸಿಲ್ಲಿ ಲಲ್ಲಿ, ಪಾಪಪಾಂಡು, ಅದಕ್ಕೂ ಹಿಂದಿನ ವಠಾರ, ಸಂಕ್ರಾಂತಿ, ಮನೆತನ, ಸಾಧನೆ ...ಸಿಹಿಕಹಿ, ಕಂಡಕ್ಟರ್ ಕರಿಯಪ್ಪ, ಎತ್ತಂಗಡಿ ವೆಂಕಟಪ್ಪ, ಕ್ರೇಜಿ ಕೆರ್ನಲ್, ಹೊಸ ಹೆಜ್ಜೆ, ..ಹೀಗೆ ಧಾರಾವಾಹಿಗಳ ಹೆಸರುಗಳನ್ನೂ ಹೇಳುತ್ತಾ ಹೋದಂತೆ ಅದರ ಕರ್ತೃ ಕಣ್ಮುಂದೆ ಬಂದು ನಿಲ್ಲುತ್ತಾರೆ. ಆ ಹೆಸರಿನಿಂದಲೇ ಆ ಧಾರಾವಾಹಿಗಳಿಗೊಂದು ಕಳೆ-ಬೆಲೆ ಇದ್ದದ್ದು ಸುಳ್ಳಲ್ಲ. ಹಾಗಾಗಿಯೇ ಟಿ.ಏನ್.ಸೀತಾರಾಂ ಅವರ ಹೊಸ ಧಾರಾವಾಹಿ ಎಂದಾಕ್ಷಣ ಗಟ್ಟಿ ಕತೆಯ ಅದಕ್ಕೂ ಮೀರಿದ ಸಂಭಾಷಣೆ ಕಣ್ಮುಂದೆ ಸರಿಯುತ್ತಿತ್ತು, ಹಾಗೆಯೇ ಸಿಹಿಕಹಿ ಚಂದ್ರು ಎಂದಾಕ್ಷಣ ನಗು ಮೂಡುತ್ತಿತ್ತು. ಬಿ.ಸುರೇಶ, ರವಿಕಿರಣ್, ರಮೇಶ್ ಭಟ್, ರವಿಗರಣಿ,.. ಹೀಗೆ ಹೇಳುತ್ತಾ ಹೋದರೆ ಅವರ ಪ್ರತಿಭೆ ಕಣ್ಮುಂದೆ ಸಾದರ ಪಡಿಸುವ ವಾಹಿನಿಯ ಧಾರಾವಾಹಿಗಳು ಕಣ್ಣಲ್ಲಿ ಸುಳಿದು ರೋಮಾಂಚನ ಉಂಟು ಮಾಡುತ್ತಿದ್ದದ್ದು ಸಹಜ. ಆದರೆ ಈವತ್ತಿಗೆ ಸಧ್ಯಕ್ಕೆ ಅದೆಲ್ಲೂ ಕಂಡುಬರುತ್ತಿಲ್ಲ.
ಬಹುಶಃ ವಾಹಿನಿಯವರೇ ಕತೆಯಿಂದ ಹಿಡಿದು ಎಲ್ಲವನ್ನು ತಮ್ಮ ಕಣ್ಣಳತೆಯಲ್ಲಿಯೇ ಮಾಡಿ ಮುಗಿಸುವುದರಿಂದ ನಿರ್ದೇಶಕ ಬರೀ ನಿರ್ವಾಹಕನಾಗಿರುವುದು ಬೇಸರದ ಸಂಗತಿ. ಇದು ಸುಮ್ಮನೆ ಆಡಿದ ಮಾತಲ್ಲ. ನೀವೇ ಯಾವುದೇ ವಾಹಿನಿಗೆ ಕತೆಯೊಂದನ್ನೋ ಅಥವಾ ಹೊಸ ಐಡಿಯಾ ಒಂದನ್ನೂ ಹಿಡಿದುಹೋಗಿ, ಎಲ್ಲವನ್ನು ಕೇಳಿಕೊಳ್ಳುವ ಅವರು ಕೊನೆಯಲ್ಲಿ ಹೇಳುವ ಮಾತೊಂದೇ, ಇದಕ್ಕೂ ವಿಭಿನ್ನವಾದ ಹೊಸತನದ ಕತೆ ನಿಮ್ಮಲ್ಲಿದೆಯೇ..? ಆದರೆ ಇಲ್ಲ ಎಂದು ತಲೆಯಲ್ಲಾಡಿಸಿ ಎದ್ದು ಬಂದು ಟಿವಿ ಆನ್ ಮಾಡಿದರೆ ನಿಮಗೆ ಸಿಗುವುದೇ ಅದೇ ರಿಮೇಕ್ ಅಥವಾ ಹಳಸಲು ಸರಕು. ಹಾಗಾಗಿ ನಿರ್ದೇಶಕ ಕೈಗೊಂಬೆಯಾಗಿ ಬಿಡುವ ಅನಿವಾರ್ಯತೆ ಎದುರಾಗುತ್ತದೆ. ಕತೆಯ ಆಯ್ಕೆ, ಚಿತ್ರಕತೆಯ ರಚನೆಯಿಂದ ಹಿಡಿದು ಕಲಾವಿದರ ಆಯ್ಕೆಯವರೆಗೂ ನಿರ್ದೇಶಕ ದೃಷ್ಟಿ ಬೊಂಬೆ ಎನಿಸಿಬಿಡುತ್ತಾನೆ. ಅದೆಲ್ಲವನ್ನೂ ವಾಹಿನಿಯವರೇ ಮುಂದೆ ನಿಂತು ಮಾಡಿಮುಗಿಸುತ್ತಾರೆ. ಅಲ್ಲಿಗೆ ನಿರ್ದೇಶನ ಎನ್ನುವ ಕೆಲಸ ನಿರ್ವಹಣೆಗಷ್ಟೇ ಸೀಮಿತವಾಗಿಬಿಡುತ್ತದೆ. ಒಬ್ಬ ಸೃಜನಶೀಲ ನಿರ್ದೇಶಕ ಹಿಂತಹ ಸಂದರ್ಭದಲ್ಲಿ ಅನಿವಾರ್ಯಕಾರಣಗಳಿಂದ ಕೆಲಸ ಒಪ್ಪಿಕೊಂಡರೂ ತದನಂತರ ಆತನಿಗೆ ಐಡೆಂಟಿಟಿ ಇಲ್ಲ ಎನಿಸಿದಾಗ ಮುಂದುವರೆಯಲು ಇಷ್ಟಪಡುವುದಿಲ್ಲ. ಅಥವಾ ಅದೊಂದು ಕೆಲಸ ಯಾಂತ್ರಿಕವಾಗಿ ಸಾಗಿಬಿಡುತ್ತದೆ. ನಿರ್ದೇಶನ ಎಂಬುದು ಯಾಂತ್ರಿಕ ಕೆಲಸವಲ್ಲ, ಅದೊಂದು ಸೃಜನಶೀಲ ನಿರ್ವಹಣೆ. ಕತೆಯ ಮೂಲದಿಂದ, ಸಂಭಾಷಣೆ ಸತ್ವದಿಂದ ಕಲಾವಿದನ ಪ್ರತಿಭೆಯಿಂದ ಸಂಕಲನಕಾರನ ಕೈಚಳಕದಿಂದ, ಹಿನ್ನೆಲೆ ಸಂಗೀತದ ಮೆರಗಿನವರೆಗೆ ನಿರ್ದೇಶಕ ಖುದ್ದಾಗಿ ನಿಂತು ಮಾಡಿಸಬೇಕಾದ, ಅದಕ್ಕೂ ಮುನ್ನ ಅದನ್ನು ಕಲ್ಪಿಸಿಕೊಳ್ಳಬೇಕಾದ ಕೆಲಸವದು.
ವಾಹಿನಿ ಎಂದಮೇಲೆ ಸ್ಪರ್ಧೆ ಅನಿವಾರ್ಯ. ಒಂದು ಧಾರಾವಾಹಿ ಒಂದು ವಾಹಿನಿಯಲ್ಲಿ ಎರ್ರಾಬಿರ್ರಿ ಹಿಟ್ ಆಗಿಬಿಟ್ಟರೆ ಮತ್ತೊಂದು ವಾಹಿನಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುವುದು ಈವತ್ತಿನ ಮಾತಲ್ಲ. ಆದರೆ ಮೊದಲೆಲ್ಲಾ ಅದೇ ಸಮಯಕ್ಕೆ ಮತ್ತೊಂದು ಹೊಸ ಕತೆಯನ್ನು ಬೇರೊಂದು ವಾಹಿನಿ ಪ್ರಸಾರ ಮಾಡಿ, ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನವನ್ನು ಪಡುತ್ತಿತ್ತು. ಆದರೆ ಈವತ್ತು ಆಗಿರುವುದೇ ಬೇರೆ. ಇಲ್ಲೊಂದು ದೆವ್ವದ ಕತೆ ಶುರುವಾದರೆ, ಪಕ್ಕದ ವಾಹಿನಿಯು ಅದೇ ಸಮಯಕ್ಕೆ ಅದೇ ತರಹದ ದೆವ್ವದ ಕತೆ ಶುರು ಮಾಡುತ್ತದೆ, ಇಲ್ಲಿ ದೇವಿಯಾದರೆ, ಅಲ್ಲೂ ದೇವಿ, ಇಲ್ಲಿ ಹಳ್ಳಿ ಕತೆಯಾದರೆ, ಅಲ್ಲೂ ಹಳ್ಳಿ ಕತೆ., ಇಲ್ಲಿ ಹಾವು ಅಲ್ಲೂ ಹಾವು.. ಹೀಗೆ. ವಾಹಿನಿಗಳು ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನಕ್ಕಿಂತ ಪಕ್ಕದ ವಾಹಿನಿಯ ಪ್ರೇಕ್ಷಕರನ್ನು ಕಡಿಮೆಗೊಳಿಸುವ ಅಥವಾ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತವೆ. ಇದು ಆರೋಗ್ಯಕರ ಸ್ಪರ್ಧೆ ಎನಿಸದೆ ಪ್ರೇಕ್ಷಕನಿಗೆ ಬೋರ್ ಆಗಿ ಎಲ್ಲಾಕಡೆ ಅದೇ ಗುರು ಎಂದುಕೊಳ್ಳುವ ಮಟ್ಟಕ್ಕೆ ತಲುಪುವಂತೆ ವಾಹಿನಿಗಳೇ ಮಾಡುತ್ತಿವೆ.
ಇದರ ಜೊತೆಗೆ ಮತ್ತೊಂದು ವಿಷಯವೆಂದರೆ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಗೆ ಯಾವ ವಾಹಿನಿಗಳೂ ಕೈ ಹಾಕಿಲ್ಲ. ಬದಲಿಗೆ ಅವರೇ ನಿಮಗೆ ಹೇಳಿಬಿಡುತ್ತಾರೆ, ನಮಗೆ ಇಷ್ಟು ಜನ ಇಂತಹ ಕಾರ್ಯಕ್ರಮಗಳನ್ನೂ ನೋಡುತ್ತಾರೆ, ಹಾಗಾಗಿ ನಮಗೆ ಇಂತಹದ್ದೇ ಬೇಕು ಎನ್ನುತ್ತಾರೆ, ಅದು ಇಂತಹದ್ದೇ ಸಾಕು ಎನ್ನುವ ಅರ್ಥವನ್ನೂ ಕೊಡುತ್ತದೆ.
ಇಲ್ಲಿ ತಪ್ಪುತ್ತಿರುವುದು ಎಲ್ಲಿ ಎನ್ನುವುದು ಬಹುದೊಡ್ಡ ಪ್ರಶ್ನೆ. ನನ್ನ ಲೆಕ್ಕ ತೆಗೆದುಕೊಂಡರೆ ನಾನು ನೂರು ಕಂತುಗಳಷ್ಟು ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದೇನೆ. ಅಲ್ಲಿ ಸೃಜನಶೀಲತೆಗೆ ಬೆಲೆ ಕಟ್ಟುವ ಹಾಗಿಲ್ಲ, ಬದಲಿಗೆ ನಿಮಿಷಕ್ಕೆ ಬೆಲೆ ಕಟ್ಟಬೇಕಾಗುತ್ತದೆ. ಅದರಲ್ಲೂ ರಿಮೇಕ್ ಧಾರಾವಾಹಿ ಒಪ್ಪಿಕೊಂಡರೆ ಮುಗಿಯಿತು, ಅಲ್ಲಿನ ಶಾಟ್ ಇಲ್ಲಿ ಏರುಪೇರಾದರೆ ಅದ್ಯಾಕಾಯಿತು ಎಂದು ಕೇಳುವವರು ಮೇಲಿನವರಲ್ಲ, ಬದಲಿಗೆ ಕಡಿಮೆ ಅನುಭವ ಇರುವ ಮತ್ತು ಅಷ್ಟೇ ಕೆಲಸ ಮಾಡುವವರು. ಏಕಧಂ ರಿಜೆಕ್ಟ್ ಮಾಡಿಬಿಡುವ ಅಧಿಕಾರ ಅವರಿಗೆ ಇರುತ್ತದೆಯಾದ್ದರಿಂದ “ಸರ್.. ಹಾಗೆ ಬರಬೇಕು ಸಾರ್..” ಎನ್ನುತ್ತಾರೆ. ಇಲ್ಲಮ್ಮಾ.. ಹೀಗೂ ಚಿತ್ರೀಕರಿಸಬಹುದು ಎಂದು ಸಮಜಾಯಿಸಿಕೊಡಲು ನೋಡಿ, ಕೇಳಿಸಿಕೊಳ್ಳದೆ ಆಕೆ ವಯ್ಯಾರವಾಗಿ ಮತ್ತೊಮ್ಮೆ ಚಿತ್ರೀಕರಿಸಿ ಎಂದು ಬೆನ್ನುತಿರುಗಿಸಿ ಹೋಗಿಬಿಡುತ್ತಾರೆ.
ಚಲನಚಿತ್ರ ಮತ್ತು ಕಿರುತೆರೆ ಮಾಧ್ಯಮಗಳಿಗೆ ಅದರದೇ ಆದ ವಿಶೇಷಗಳಿವೆ. ಹಾಗೆ ಮಿತಿಯೂ ಇದೆ. ಸಿನಿಮಾಕ್ಕೆ ಅವಧಿಯ ಮಿತಿಯಿದೆ. ಏನೇ ಉದ್ದ ಚಿತ್ರೀಕರಿಸುತ್ತೇವೆ ಎಂದರೂ ಮೂರು ಘಂಟೆಗೆ ಸೀಮಿತವಾಗುತ್ತದೆ. ಆದರೆ ಧಾರಾವಾಹಿ ಆಗಲ್ಲ. ಉದಾಹರಣೆಗೆ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಎರಡೂವರೆ-ಮೂರು ಘಂಟೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ವಿಸ್ತೃತವಾಗಿ ತೋರಿಸುವುದು ಅಸಾಧ್ಯ. ಹಾಗೂ ಪ್ರಯತ್ನಿಸಿದರೆ ಎಷ್ಟೋ ವಿವರಗಳು, ವಿಶೇಷಗಳು ಎಗರಿಹೋಗುತ್ತವೆ. ಮತ್ತು ಅಂತಹ ಮಹಾನ್ ಕೃತಿಗಳಿಗೆ ನ್ಯಾಯ ದೊರಕಿಸಿಕೊಡಲು ಹೆಣಗಬೇಕಾಗುತ್ತದೆ ಮತ್ತು ಅದರಲ್ಲಿ ಯಶಸ್ಸು ಕಡಿಮೆಯೇ. ಹಾಗಾಗಿ ಇಂತಹ ಸಂದರ್ಭದಲ್ಲಿ ಕಿರುತೆರೆವಾಹಿನಿ ವರದಾನ ಎನಿಸಿಕೊಳ್ಳುತ್ತದೆ. ಹಾಗಾಗಿ ಚಿತ್ರರಂಗದಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದರೂ ಶಂಕರ್ ನಾಗ್ ಮಾಲ್ಗುಡಿ ಡೇಸ್ ಅನ್ನು ಕಿರುತೆರೆಗೆ ತರುತ್ತಾರೆ. ಅಷ್ಟೂ ಕತೆಗಳಿಗೆ ನ್ಯಾಯ ಒದಗಿಸಲು ಸಿನಿಮಾ ಮಾಧ್ಯಮದಲ್ಲಿ ಕಷ್ಟ ಎಂಬುದರ ಅರಿವಿದ್ದದರಿಂದ ಶಂಕರ್ ನಾಗ್ ಈ ನಿರ್ಧಾರ ತೆಗೆದುಕೊಂಡದ್ದು. ಹಾಗಾಗಿಯೇ ಈವತ್ತಿಗೂ ಮಾಲ್ಗುಡಿ ಡೇಸ್ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಹಿನಿಯವರು ಈ ಮಹತ್ವವನ್ನು ಪಕ್ಕಕ್ಕೆ ಸರಿಸಿ ಟಿಆರ್ಪಿ ಬೆನ್ನು ಬಿದ್ದಿದ್ದಾರೆ. ಜನ ಯಾವುದನ್ನು ತೋರಿಸಿದರೆ ನೋಡುತ್ತಾರೆ ಎಂಬುದನ್ನು ಗಮನಿಸಿ, ಅದನ್ನೇ ಹಿಂದೆ ಮುಂದೆ ನೋಡದೆ ಪ್ರಸಾರ ಮಾಡಲು ಹಾತೊರೆಯುವ ಮನಸ್ಥಿತಿ ಅವರದ್ದಾಗಿದೆ. ಹಾಗಾಗಿಯೇ ಹಳೆಯ ಧಾರಾವಾಹಿಗಳು ಮರುಪ್ರಸಾರವಾಗುತ್ತವೆ, ಸ್ಟಾರ್ ನಟನ ಮದುವೆ ವೀಡಿಯೊ ಪ್ರಸಾರವಾಗುತ್ತದೆ, ರಿಮೇಕ್ ಧಾರಾವಾಹಿಗಳು, ರಿಮೇಕ್ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.

ಕಿರುತೆರೆ ಎನ್ನುವುದು ಪ್ರತಿಭೆಗೆ ದಾರಿದೀಪವಾಗಿತ್ತು ಮತ್ತು ಆಗಿರಬೇಕು. ಈವತ್ತಿನ ಬಹುತೇಕ ಸ್ಟಾರ್ ನಟರುಗಳು ಪಾದಾರ್ಪಣೆ ಮಾಡಿದ್ದು ಕಿರುತೆರೆಗಳಿಂದಲೇ. ಹಾಗಾಗಿ ಕಿರುತೆರೆಯ ಮಹತ್ವ ದೊಡ್ಡದಿದೆ. ಹೊಸ ಪ್ರತಿಭಾನ್ವಿತರನ್ನು ಹುಟ್ಟುಹಾಕುವ ಅವರ ಪ್ರತಿಭೆಗಳನ್ನು ಗುರುತಿಸುವ ಕೆಲಸ ಕಿರುತೆರೆಗಳಿಂದ ಆಗಬೇಕಾಗುತ್ತದೆ. ಕೇವಲ ಟಿ.ಆರ್.ಪಿ. ಓಟದ ಸ್ಪರ್ಧೆಯಲ್ಲಿ ಹಿಂದೆ ಮುಂದೆ ನೋಡದೆ ಓಡುವುದರಿಂದ ಸೃಜನಶೀಲತೆಗೆ ಧಕ್ಕೆ ಬರುತ್ತದೆ. ಒಬ್ಬ ಪ್ರತಿಭಾನ್ವಿತ ನಿರ್ದೇಶಕ, ಬರಹಗಾರ, ನಟ, ನಟಿ ವಾಹಿನಿಗಳ ಮೂಲಕ ಬೆಳಕು ಕಾಣುವ ಅವಕಾಶವಿದೆ. ಸಧ್ಯಕ್ಕೆ ಅದು ಮರೀಚಿಕೆಯಾಗಿದೆ.